Advertisement

ಎಡದಂಡೆ ಕಾಲುವೆ ಆಧುನೀಕರಣಕ್ಕೆ ಸರ್ವೇ

02:31 PM May 06, 2022 | Team Udayavani |

ಮಸ್ಕಿ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರಿನ ಹರಿವು ಸ್ಥಗಿತವಾಗಿದ್ದು, ನೀರಾವರಿ ಇಲಾಖೆ ಮಸ್ಕಿ ವ್ಯಾಪ್ತಿಗೊಳಪಟ್ಟ ಕಾಲುವೆಗಳ ಆಧುನೀಕರಣಕ್ಕೆ ಸರ್ವೇ ನಡೆಸಲಾಗುತ್ತಿದೆ.

Advertisement

ಕಳೆದ 2008ರಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮತ್ತು ವಿತರಣಾ ಕಾಲುವೆಗಳ ಆಧುನೀಕರಣ ಹಂತ-ಹಂತವಾಗಿ ಸಾಗಿದೆ. ಮಸ್ಕಿ ವ್ಯಾಪ್ತಿಯಲ್ಲಿ ಮುಖ್ಯ ಮತ್ತು ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿ ಬಹುತೇಕ ಪೂರ್ಣವಾಗಿದೆ. ಆದರೆ ಕೆಲವು ಕಡೆ ಬಿಟ್ಟು ಹೋದ ಪ್ರದೇಶಗಳನ್ನು ಮತ್ತು ರಿಪೇರಿಗೆ ಒಳಗಾಗದ ಭಾಗಗಳನ್ನು ಗುರುತು ಮಾಡಿ ಅಂತಹ ಸ್ಥಳಗಳಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲು ಕರ್ನಾಟಕ ನೀರಾವರಿ ನಿಗಮದ ನೀರಾವರಿ ಇಲಾಖೆ ಅಧಿಕಾರಿಗಳ ಯೋಜನೆಯಾಗಿದೆ. ಇದಕ್ಕಾಗಿ ಮಸ್ಕಿ ನಂ.4 ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಅಗತ್ಯ ಇರುವ ಕಡೆಗಳಲ್ಲಿ ಕೆಲಸ ಆರಂಭಿಸಲು ಸಿದ್ಧತೆ ನಡೆದಿದ್ದು, ಇದಕ್ಕಾಗಿ ಡಿಪಿಆರ್‌ ತಯಾರಿಸಲು ಖಾಸಗಿ ಏಜೆನ್ಸಿಗೆ ಟೆಂಡರ್‌ ಹಂಚಿಕೆ ಪ್ರಕ್ರಿಯೆ ಶುರುವಾಗಿದೆ.

ಎಲ್ಲಿಂದ? ಎಲ್ಲಿಗೆ?: ಮಸ್ಕಿ ವ್ಯಾಪ್ತಿಗೆ ಸೇರಿದ ಮೈಲ್‌ 47ರಿಂದ ಮೈಲ್‌ 69ವರೆಗೂ ಬರುವ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ವಿತರಣಾ ಕಾಲುವೆಗಳನ್ನು ದುರಸ್ತಿ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಅಲ್ಲದೇ ಮಸ್ಕಿ ಕೇಂದ್ರ ಸ್ಥಾನದಲ್ಲಿರುವ ನೀರಾವರಿ ಇಲಾಖೆ ನಂ.4 ವಿತರಣಾ ಕಾಲುವೆಯ ಕಚೇರಿ ದುರಸ್ತಿ, ಕಚೇರಿ ಸುತ್ತಲೂ ಕಾಂಪೌಂಡ್‌ ನಿರ್ಮಾಣ, ನೀರಾವರಿ ಇಲಾಖೆಗೆ ಸೇರಿದ ವಸತಿ ಸಮುತ್ಛಯಗಳ ದುರಸ್ತಿ ಸೇರಿ ಇತರೆ ಕಾಮಗಾರಿ ಕೈಗೊಳ್ಳಲು ಸರ್ವೇ ನಡೆಸಿ ಸಮಗ್ರ ಡಿಪಿಆರ್‌ ತಯಾರಿಸಲು ಸೂಚನೆ ನೀಡಲಾಗಿದೆ.

15 ಲಕ್ಷ ರೂ. ಮೀಸಲು: ತುಂಗಭದ್ರಾ ಎಡದಂಡೆಯ ಮಸ್ಕಿ ವ್ಯಾಪ್ತಿಗೆ ಸೇರಿದ ಮುಖ್ಯ ಕಾಲುವೆ, ವಿತರಣಾ ಕಾಲುವೆ, ತೂಬುಗಳು ಸೇರಿ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೂ ಸರಾಗವಾಗಿ ನೀರು ಹರಿಯುವ ವ್ಯವಸ್ಥೆಗೆ ಬೇಕಿರುವ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಪ್ಲ್ಯಾನ್‌ ರೂಪಿಸುವುದಕ್ಕಾಗಿಯೇ ಸದ್ಯ 15 ಲಕ್ಷ ರೂ. ಹಣ ಮೀಸಲಿರಿಸಲಾಗಿದೆ. ಈ 15 ಲಕ್ಷ ರೂ. ಮೊತ್ತದಲ್ಲಿ ಡಿಪಿಆರ್‌ ತಯಾರಿಸಿ ಕೊಡಲು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ.

ಖಾಸಗಿ ಏಜೆನ್ಸಿಯ ಅಧಿಕಾರಿಗಳು ಸ್ಥಾನಿಕ ಪರಿಶೀಲನೆ ನಡೆಸಿ, ಆಧುನೀಕರಣಕ್ಕೆ ಅಗತ್ಯ ಇರುವ ಪ್ರದೇಶಗಳನ್ನು ಗುರುತು ಮಾಡಿ ಅದಕ್ಕೆ ತಗಲುವ ಹಣಕಾಸಿನ ಅಂದಾಜು ಅಂಕಿ-ಸಂಖ್ಯೆ, ಸಂಪೂರ್ಣ ಡಿಪಿಆರ್‌ ನೀಡುವುದಕ್ಕೆ ಗುತ್ತಿಗೆ ವಹಿಸಲಾಗಿದೆ.

Advertisement

ಸಮಸ್ಯೆ ಪರಿಹಾರವಾಗುವುದೇ?

ಕೋಟ್ಯಂತರ ರೂ. ಖರ್ಚು ಮಾಡಿ ತುಂಗಭದ್ರಾ ಎಡದಂಡೆ ಮುಖ್ಯ ಮತ್ತು ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಆದರೂ ಇನ್ನು ಅಚ್ಚುಕಟ್ಟು ಪ್ರದೇಶದ ಕೆಳಭಾಗದ ರೈತರ ಜಮೀನುಗಳಿಗೆ ಇದುವರೆಗೂ ನೀರು ತಲುಪುತ್ತಿಲ್ಲ ಎನ್ನುವ ಕೂಗು ಇದೆ. ಈಗ ಅಂತಹ ಪ್ರದೇಶಗಳನ್ನು ಗುರುತು ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ಬಾರಿಯಾದರೂ ಶಾಶ್ವತ ಪರಿಹಾರ ದಕ್ಕುವುದೇ ಕಾದು ನೋಡಬೇಕಿದೆ.

ತುಂಗಭದ್ರಾ ಎಡದಂಡೆ ಮುಖ್ಯ ಮತ್ತು ವಿತರಣಾ ಕಾಲುವೆಗಳಲ್ಲಿ ಅಗತ್ಯ ಇರುವ ಕಡೆ ಆಧುನೀಕರಣ ಕಾಮಗಾರಿ ಕೈಗೊಳ್ಳಲು ಈಗ ಪ್ಲ್ಯಾನ್‌ ಮಾಡಲಾಗುತ್ತಿದೆ. ಇದಕ್ಕಾಗಿ ಡಿಪಿಆರ್‌ ತಯಾರಿಸಲು ಖಾಸಗಿ ಏಜೆನ್ಸಿಗೆ ವಹಿಸಲಾಗುತ್ತಿದೆ. -ದಾವೂದ್‌, ಎಇಇ, ನೀರಾವರಿ ಇಲಾಖೆ, ಮಸ್ಕಿ

-­ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next