ಬೀದರ: ಮಕ್ಕಳ ಶೈಕ್ಷಣಿಕ ಬದುಕಿನೊಂದಿಗೆ ಚಲ್ಲಾಟ ಆಡುತ್ತಿರುವ ಅನಧಿಕೃತ ಶಾಲೆಗಳ ಪತ್ತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಈಗಾಗಲೇ ಸರ್ವೇ ಕಾರ್ಯ ಆರಂಭಿಸಿದೆ. ಪರವಾನಗಿ ರಹಿತ ಖಾಸಗಿ ಶಾಲೆಗಳು ನಡೆಯುತ್ತಿರುವ ಕುರಿತು ದೂರುಗಳು ಇರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಶಾಲೆಗಳ ಡ್ರೆಸ್ ಕೋಡ್, ಪ್ರತಿ ವರ್ಷ ನವೀಕರಣ ಮಾಡಲಾದ ಪ್ರಮಾಣ ಪತ್ರ, ಪರವಾನಗಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆ ಕಾರ್ಯಕ್ಕೆ ಮುಂದಾಗಿದೆ. ಆಯಾ ತಾಲೂಕಿನ ಬಿಆರ್‌ಸಿ ಸಿಬ್ಬಂದಿಗಳ ಮೂಲಕ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುವಂತೆ ಡಿಡಿಪಿಐ ಆದೇಶ ನೀಡಿದ್ದಾರೆ.
ಬಹುತೇಕ ಶಾಲೆಗಳು ಕನ್ನಡ ಮಾಧ್ಯಮಕ್ಕೆ ಪರವಾನಗಿ ಪಡೆದು ಸಿಬಿಎಸ್‌ಸಿ, ಐಸಿಎಸ್‌ಇ ಮಾಧ್ಯಮಗಳಲ್ಲಿ ಶಿಕ್ಷಣ
ಬೋಧಿಸುತ್ತಿರುವ ಕುರಿತು ಪ್ರಚಾರ ಮಾಡಿ ಪಾಲಕರ ಗಮನ ಸೇಳೆಯುತ್ತಿವೆ. ಅಲ್ಲದೇ ಶಿಕ್ಷಣ ಇಲಾಖೆಯ ನಿಮಯ ಮೀರಿ ಹಣ ಪಡೆಯುತ್ತಿರುವ ಕುರಿತೂ ಶಿಕ್ಷಣ ಇಲಾಖೆಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಶಾಲೆಗಳ ನಿಯಂತ್ರಣಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇಲಾಖೆಯ ನಿಯಮಗಳ ಪ್ರಕಾರ ಶಾಲೆಗಳು ಸೂಕ್ತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬೇಕು.
ಆದರೆ ಎಲ್ಲ ತಾಲೂಕುಗಳಲ್ಲಿ ಇಂದಿಗೂ ತಗಡಿನ ಶೆಡ್‌ನಲ್ಲಿ ಮಕ್ಕಳಿಗೆ ಪಾಠ ಬೋಧಿಸಲಾಗುತ್ತಿದೆ. ಅಲ್ಲದೆ ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳು ಕಡ್ಡಾಯವಾಗಿ ಉತ್ತಮ ಕಟ್ಟಡದಲ್ಲಿ ತರಗತಿ ನಡೆಸಬೇಕು. ಆದರೆ ಶಾಲೆಯನ್ನು ತಗಡಿನ ಶೆಡ್‌ನಲ್ಲಿ ನಡೆಸುತ್ತಿದ್ದು, ಅವುಗಳ ವಿರುದ್ಧ ಕೂಡ ಕಠಿಣ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ.
ಸದ್ಯ ಶಿಕ್ಷಣ ಇಲಾಖೆಯ ಕ್ರಮಕ್ಕೆ ಪಾಲಕರು ಸ್ವಾಗತಿಸಿದ್ದು, ಶಾಲೆ ಆರಂಭಕ್ಕೂ ಮುನ್ನವೇ ಸರ್ವೇ ಕಾರ್ಯ ನಡೆಸಬೇಕಿತ್ತು. ಅಲ್ಲದೇ ಶಾಲಾ ಪ್ರಾರಂಭಕ್ಕೂ ಮುನ್ನವೆ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸಬೇಕಿತ್ತು ಎಂಬ ಮಾತುಗಳು ಪಾಲಕರಿಂದ ಕೇಳಿಬಂದಿವೆ.
ಈಗಾಗಲೇ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿದ್ದಾರೆ. ಆದರೆ ಯಾವ ಶಾಲೆ ಅನಧಿಕೃತ ಹಾಗೂ ಯಾವ ಶಾಲೆ ಅಧಿಕೃತ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇದೀಗ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಂಡು ಪಾಲಕರು ಪಾವತಿಸಿದ ಹಣ ಮರಳಿ ಕೊಡಿಸುವ ಮೂಲಕ ಬೇರೆ ಶಾಲೆಗೆ ದಾಖಲಿಸಲು ಸಹಕರಿಸಬೇಕು ಎಂಬುದು ಪಾಲಕರ ಆಗ್ರಹವಾಗಿ¨
ಜಿಲ್ಲೆಯಲ್ಲಿನ ಅನಧಿಕೃತ ಶಾಲೆಗಳು ಹಾಗೂ ಪರವಾನಗಿ ನವೀಕರಣಗೊಳಿಸದ ಶಾಲೆಗಳ ಕುರಿತು ಸರ್ವೇ ಕಾರ್ಯ ನಡೆಯುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಸರ್ವೇ ವರದಿ ಬಂದ ನಂತರ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕನ್ನಡ ಮಾಧ್ಯಮ ಪರವಾನಗಿ ಪಡೆದು ಸಿಬಿಎಸ್‌ಇ ಶಾಲೆ ನಡೆಸುತ್ತಿರುವ ಕುರಿತು ದೂರು ಬಂದಲ್ಲಿ ಶಾಲಾ ದಾಖಲಾತಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ತಗಡಿನ ಶೆಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಿಗೆ ನೋಟಿಸ್ ನೀಡಲಾಗಿದ್ದು, ಸುರಕ್ಷಿತ ಕಟ್ಟಡ ನಿರ್ಮಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಉಮೇಶ, ಡಿಡಿಪಿಐ ಬೀದರ
ದುರ್ಯೋಧನ ಹೂಗಾರ