Advertisement
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಏರ್ ಶೋಗೆ ಗಣ್ಯರು, ಅತೀ ಗಣ್ಯರು, ವಿದೇಶಿ ಗಣ್ಯರು ಸೇರಿ ಲಕ್ಷಾಂತರ ಮಂದಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದು, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
Related Articles
Advertisement
ವಾಯುನೆಲೆ ಒಳಗಡೆ, ಹೊರಗಡೆ ಮತ್ತು ಏರ್ ಡಿಫೆನ್ಸ್‌ಗಳಲ್ಲಿ ಮೂರು ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಒಂದು ಕಂಬೈಂಡ್ ನಿಯಂತ್ರಣ ಕೊಠಡಿಯಿದ್ದು, ವಾಯುಸೇನೆ, ಸಿಎಸ್‌ಎಫ್, ಡಿಸಾರ್ಟರ್ ಮ್ಯಾನೆಜ್‌ಮೆಂಟ್ ಸಿಬ್ಬಂದಿ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಯಾವುದೇ ರೀತಿಯ ಅವಘಡ ನಡೆಯದಂತೆ ಕ್ರಮವಹಿಸಲು ನಾಲ್ಕು ತುರ್ತು ನಿರ್ವಹಣಾ ದಳ ನಿಯೋಜಿಸಲಾಗಿದೆ.
ವಾಯುನೆಲೆಯ ಸುತ್ತಲಿನ ಗ್ರಾಮ ಮತ್ತು ಇತರೆ ಸ್ಥಳಗಳಲ್ಲಿ ಕಣ್ಗಾವಲು ಪೊಲೀಸ್ ತಂಡ ಅನುಮಾನಸ್ಪದ ವ್ಯಕ್ತಿಗಳನ್ನು ನಿರಂತರವಾಗಿ ತಪಾಸಣೆ ನಡೆಸಲಿದೆ. ಬಾಂಬ್ ನಿಷ್ಕ್ರಿಯ ದಳ, ಎ.ಎಸ್.ಚೆಕ್ ಮತ್ತು ಶ್ವಾನ ದಳಗಳು ಕೂಡ ತಪಾಸಣೆ ನಡೆಸಲಿವೆ. ಜತೆಗೆ ಏರ್ ಶೋ ವೀಕ್ಷಣೆಗೆ ಸುಮಾರು 250ಕ್ಕೂ ಹೆಚ್ಚು ಗಣ್ಯರು, ವಿದೇಶಿ ಗಣ್ಯರು ಆಗಮಿಸುವ ನಿರೀಕ್ಷೆಯಿದ್ದು, ಅವರ ವಾಸ್ತವ್ಯದ ಸ್ಥಳಗಳಲ್ಲೂ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಶಾರ್ಪ್‌ಶೂಟರ್‌ಗಳ ನಿಯೋಜನೆ: ವಾಯುನೆಲೆಯ ಸುತ್ತ-ಮುತ್ತಲ 30 ಸ್ಥಳಗಳಲ್ಲಿ ಗರುಡ ಪಡೆಯ ಶಾರ್ಪ್‌ಶೂಟರ್‌ಗಳನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ರಾಡರ್‌ಗಳಿಗೆ ಸಿಗದಂತಹ ವಸ್ತುಗಳು ಆಗಸದಲ್ಲಿ ಹಾರಾಟ ನಡೆಸುತ್ತಿದ್ದರೆ, ನಿಷ್ಕ್ರಿಯಗೊಳಿಸುವುದರ ಜತೆಗೆ ನಾಶ ಕೂಡ ಮಾಡಲಿದ್ದಾರೆ.
ಅಲ್ಲದೆ, ಸೋಲದೇವನಹಳ್ಳಿಯಲ್ಲಿ ಏರ್‌ಡಿಫೆನ್ಸ್ ಇದ್ದು, ಇಲ್ಲಿನ ಸಿಬ್ಬಂದಿ ರಾಡರ್‌ಗೆ ಸಿಗುವಂತಹ ಯಾವುದೇ ವಸ್ತುಗಳು ಅನಧಿಕೃತವಾಗಿ ಆಕಾಶದಲ್ಲಿ ಹಾರಾಟ ನಡೆಸಿದರೂ ನಿಷ್ಕ್ರಿಯಗೊಳಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದರು.
ಅನಧಿಕೃತ ವಿಮಾನ ಹಾರಾಟ ನಿಷೇಧ: ಫೆ.20ರಿಂದ ಫೆ.24ರವೆರೆಗೆ ಯಲಹಂಕದಲ್ಲಿ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರಾದ್ಯಂತ ಅನಧಿಕೃತ ವೈಮಾನಿಕ ಹಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಫೆ.20ರಿಂದ ಫೆ.24ರವೆರೆಗೆ ಅಧಿಕೃತ ವಿಮಾನಗಳು ಹೊರತುಪಡಿಸಿ ಡ್ರೋಣ್, ಬಲೂನ್‌ಗಳು ಮತ್ತು ಮಾನವ ರಹಿತ ಹಾಗೂ ಇತರೆ ಯಾವುದೇ ವೈಮಾನಿಕ ವಸ್ತುಗಳು ಹಾರಾಟ ನಡೆಸುವಂತಿಲ್ಲ. ಒಂದು ವೇಳೆ ಅನಧಿಕೃತವಾಗಿ ಹಾರಾಟ ನಡೆಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.