ಬೆಂಗಳೂರು: ನಗರಕ್ಕೆ ಹೊರರಾಜ್ಯ ಹಾಗೂ ವಿದೇಶದಿಂದ ಬರುವ ಪ್ರಯಾಣಿಕರ ಕಣ್ಗಾವಲು ತಂಡಕ್ಕೆ ಮೇಯರ್ ಎಂ. ಗೌತಮ್‌ಕುಮಾರ್ ಅವರು ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು. ಈ ಕುರಿತು ಸುದ್ದಿಗಾರರ ಜತೆ ಮಾತನಾಡಿ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್, ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರು ಕ್ವಾರಂಟೈನ್ ಅವಧಿಯಲ್ಲಿ ಹೊರಗೆ ಓಡಾಡದಂತೆ ಹಾಗೂ ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿದ್ದಾರೆಯೇ, ಇಲ್ಲವೇ ಎನ್ನುವ ಬಗ್ಗೆ ಪರಿಶೀಲಿಸಲು ಪ್ರತಿ ವಿಧಾನಸಭಾ ಕ್ಷೇತ್ರವಾರು ಕಣ್ಗಾವಲು ತಂಡ ರಚನೆ ಮಾಡಲಾಗಿದೆ ಎಂದರು.
ಈ ತಂಡವು ಹೋಂಕ್ವಾರಂಟೈನ್ ನಲ್ಲಿರುವವರು ನಿಯಮ ಉಲ್ಲಂಘನೆ ಮಾಡಿದರೆ ಮೊದಲ ಬಾರಿ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿಯೂ ನಿಯಮ ಉಲ್ಲಂಘನೆ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಿದ್ದಾರೆ. ಅಲ್ಲದೆ, ಈ ರೀತಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಎಫ್ಐಆರ್ ದಾಖಲಿಸಲಾಗುವುದು. ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಯಿಂದ ಬರುವವರನ್ನು ಸಾಂಸ್ಥಿಕ ಗೃಹ ಬಂಧನ ಮಾಡಲಾಗುತ್ತಿದೆ.
ಉಳಿದ ರಾಜ್ಯಗಳಿಂದ ಹಾಗೂ ವಿದೇಶದಿಂದ ಬರುವವರ ಮಾಹಿತಿ ಕಲೆಹಾಕಿ, ಅವರ ಕೈಗೆ ಸ್ಟಾಂಪಿಂಗ್ ಹಾಕಿ 14 ದಿನಗಳ ಹೋಂ ಕ್ವಾರಂಟೈನ್ ಮಾಡಲಿದ್ದೇವೆ. ಇವರು ನಿಯಮ ಉಲ್ಲಂಘನೆ ಮಾಡಿದರೆ ಕಣ್ಗಾವಲು ತಂಡಕ್ಕೆ ಸಂದೇಶ ರವಾನೆಯಾಗಲಿದೆ ಎಂದು ವಿವರಿಸಿದರು. ಈ ವೇಳೆ ಉಪಮೇಯರ್ ರಾಮಮೋಹನ್ ರಾಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು.ಜಿ, ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್ ಹಾಗೂ ಮಂಜುನಾಥ್, ಅಪರ ಪೊಲೀಸ್ ಆಯುಕ್ತ ಮರುಗನ್ ಇತರರಿದ್ದರು.
17 ಕಾರ್ಯಪಡೆ: ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ತಡೆ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸರ್ಕಾರವು ವಿವಿಧ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಗಳನ್ನು ಒಳಗೊಂಡ 17 ಕಾರ್ಯಪಡೆಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳಲ್ಲಿ ಗೃಹ ಬಂಧನ ವೀಕ್ಷಣೆ ಜವಾಬ್ದಾರಿಯನ್ನು ಪಶು ಪಾಲನೆ ಮತ್ತು ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ನೀಡಲಾಗಿದ್ದು, ಬಿಬಿಎಂಪಿ ಆಯುಕ್ತರನ್ನೇ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.