Advertisement

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

04:04 PM Nov 19, 2024 | Team Udayavani |

ಹೆಬ್ರಿ: ಕಬ್ಬಿನಾಲೆ, ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ‌ ಎಎನ್ಎಫ್ ಪಡೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿದ್ದು, ನ.19ರ ಮಂಗಳವಾರ ‌ಘಟನಾ ಸ್ಥಳಕ್ಕೆ ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಐಜಿ ರೂಪಾ ಮೌದ್ಗಿಲ್ ಭೇಟಿ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಕ್ಸಲರ ಚಲನವಲನದ‌ ಬಗ್ಗೆ ಮಾಹಿತಿ ಮೇರೆಗೆ ಎಎನ್ಎಫ್ ಕೋಂಬಿಂಗ್ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ‌ ನಕ್ಸಲರು ಮುಖಾಮುಖಿಯಾಗಿದ್ದಾರೆ. ಶರಣಾಗತಿಗೆ ಸೂಚನೆ ನೀಡಿದರೂ, ನಕ್ಸಲರ ತಂಡದಿಂದ ಎಎನ್ಎಫ್ ಸಿಬಂದಿ ದಾಳಿಗೆ ತಯಾರಿ ನಡೆಸಿದರು. ಈ ವೇಳೆ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾರೆ. ಈತನ ವಿರುದ್ದ ಕೊಲೆ, ಕಳ್ಳತನ, ದರೋಡೆ ಸಹಿತ 60 ಕ್ಕೂ ಅಧಿಕ ಪ್ರಕರಣಗಳಿದ್ದು, ಕರ್ನಾಟಕ, ಕೇರಳ, ತಮಿಳುನಾಡು ಸಹಿತ ಮೂರು ರಾಜ್ಯಗಳಿಗೆ ಬೇಕಾದ ನಕ್ಸಲ್ ವಿಕ್ರಂ ಗೌಡ. ನಕ್ಸಲ್ ನಿಗ್ರಹ ಪಡೆ ಪೊಲೀಸ್ ಅಧೀಕ್ಷಕ ಜಿತೇಂದ್ರ ದಯಾಮಾ ಅವರ  ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

10 ದಿನಗಳ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಆಂತರಿಕ ವಿಭಾಗದ ಡಿಜಿಪಿ ಗಣಮೋಹನ್ ಪಿ. ಮಾರ್ಗದರ್ಶನ, ಗುಪ್ತಚರ ವಿಭಾಗ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಕಾರದಲ್ಲಿ ಕಾರ್ಯಾಚರಣೆ ನಡೆದಿದೆ. ಉಡುಪಿ ಜಿಲ್ಲೆಯಲಿ ಇದು 6ನೇ ನಕ್ಸಲ್ ಎನ್ ಕೌಂಟರ್ ಆಗಿದೆ.

‌ವಿಕ್ರಮ್ ಗೌಡನಿಗೆ 46 ವರ್ಷ ‌ವಯಸ್ಸಾಗಿದ್ದು, ಕಬಿನಿ ದಳದ 2ನೇ ತಂಡವನ್ನು ಮುನ್ನಡೆಸುತ್ತಿದ್ದ. 4ನೇ ತರಗತಿ ವಿದ್ಯಾಭ್ಯಾಸ ಮಾತ್ರ ಪಡೆದಿದ್ದ ಎಂದು ಮಾಹಿತಿ ನೀಡಿದರು. ಎಎನ್ ಎಫ್ ಎಸ್ ಪಿ ಜಿತೇಂದ್ರ ದಯಾಮ, ಉಡುಪಿ ಜಿಲ್ಲಾ ಪೊಲೀಸ್ ‌ಅಧೀಕ್ಷಕ ಡಾ| ಅರುಣ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next