ಬಸವಕಲ್ಯಾಣ: ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಕಾಪಾಡುವ ಮೂಲಕ ದೇಶ ಕಟ್ಟುವ ಕೆಲಸ ನಡೆಯಬೇಕಾದ ಅವಶ್ಯಕತೆ ಇದೆ ಎಂದು ಮೈಸೂರಿನ ಪ್ರಗತಿಪರ ಚಿಂತಕ ಡಾ| ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ತಾಲೂಕಿನ ಬೇಲೂರನಲ್ಲಿ ಉರಿಲಿಂಗ ಪೆದ್ದಿ ಸಾಂಸ್ಕೃತಿಕ ಸಾಹಿತ್ಯಿಕ ವೇದಿಕೆಯಿಂದ ಶರಣ ಉರಿಲಿಂಗಪೆದ್ದಿ ಉತ್ಸವ, ಲಿಂ| ಶಿವಲಿಂಗೇಶ್ವರ ಶಿವಯೋಗಿಗಳ 49ನೇ ಸ್ಮರಣೋತ್ಸವ, ಸಾಮಾಜಿಕ ಸಾಮರಸ್ಯ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಕಾಣುವ ಮೂಲಕ ಸಾಮಾಜಿಕ ಸಾಮರಸ್ಯ ಬೆಳೆಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಸ್ಥಾವರ ಸಂಸ್ಕೃತಿ ಬೇಳೆಸುವುದು ಶರಣ ಸಂಸ್ಕೃತಿಗೆ ಅಪಚಾರ ಎಸಗಿದಂತೆ. ಶರಣರನ್ನು ವೈಭವಿಕರಿಸುವ ಕೆಲಸ ಮಾಡದೆ ಅವರ ತತ್ವಗಳನ್ನು ಅರಿತು ಜೀವನದಲ್ಲಿ ಅಳವಡಿಸಕೊಳ್ಳಲು ಪ್ರಯತ್ನಿಸಬೇಕು. ಶರಣರ ಹೆಸರಿನಲ್ಲಿ ಮೂರ್ತಿ ಸ್ಥಾಪಿಸಲು ಸರ್ಕಾರ ಅನುದಾನ ಕಲ್ಪಿಸಬಾರದು. ಅದೇ ಹಣದಲ್ಲಿ ಪ್ರತಿ ಜಿಲ್ಲೆ, ತಾಲೂಕು ಮಟ್ಟದಲ್ಲಿ ಉದ್ಯಾನ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಶ್ರೀ ಗುರುಬಸವ ಪಟ್ಟದೇವರು ಆಶೀರ್ವಚನ ನೀಡಿ, ವೈಚಾರಿಕ ತತ್ವದಡಿ ಕ್ರಾಂತಿ ಗೈದ ಬುದ್ಧ, ಬಸವ, ಡಾ| ಅಂಬೇಡ್ಕರ್ ಅವರ ತತ್ವ, ಸಂದೇಶಗಳನ್ನು ಎಲ್ಲರೂ ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುವ ಜೊತೆಗೆ ಸಾಮರಸ್ಯದಿಂದ ಕೂಡಿದ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಆಣದೂರನ ಶ್ರೀ ಧಮ್ಮಾನಂದ ಭಂತೆಜಿ ಸಾನ್ನಿಧ್ಯ, ಬೇಲೂರ ಉರಿಲಿಂಗ ಪೆದ್ದಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಗದಗನ ಚಿಂತಕ ಡಾ| ಅರ್ಜುನ ಗೊಳಸಂಗಿ ಅಧ್ಯಕ್ಷೀಯ ಭಾಷಣ ಮಾಡಿದರು. ವಿಜಯಪುರದ ಬಸವರಾಜ ದಯಾಸಾಗರ, ಕಲಬುರಗಿಯ ಎಂ.ಬಿ. ನಿಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಫರ್ನಾಡೀಸ್ ಹಿಪ್ಪಳಗಾಂವ, ಸಾಹಿತಿ ಚಂದ್ರಪ್ಪ ಹೆಬ್ಟಾಳಕರ್, ನಾಗೇಂದ್ರ ಢೋಲೆ, ಯೋಗರಾಜ ಕೆ., ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ದೊಡ್ಮನಿ, ಪ್ರಚಾರ ಸಮಿತಿ ಅಧ್ಯಕ್ಷ ಸಂದೀಪ ಬಿರಾದಾರ ಹಾಗೂ ಪ್ರಮುಖರು ಇದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಸ್ವಾಗತಿಸಿದರು. ಸಂಯೋಜಕ ಡಾ| ಗವಿಸಿದ್ಧಪ್ಪ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾರ್ವತಿ ಸೋನಾರೆ ನಿರೂಪಿಸಿದರು. ಸ್ನೇಹಾ ರಾಜಕುಮಾರ ಮತ್ತು ತನಿಷ್ ಸಂಜುಕುಮಾರ ಮುಡಬಿ ವಚನ ಗಾಯಕ ಮತ್ತು ಸ್ವಾಗತ ಗೀತೆ ನಡೆಸಿಕೊಟ್ಟರು.
ನಂತರ ಸಾಮಾಜಿಕ ಸಾಮರಸ್ಯ ಮತ್ತು ಸಾಹಿತ್ಯ ವಿಷಯ ಕುರಿತು ಗೋಷ್ಠಿ ನಡೆಯಿತು. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ ಡಾ| ಜಯದೇವಿ ಗಾಯಕವಾಡ ಆಶಯ ಭಾಷಣ ಮಾಡಿದರು. ಗುರುಮಿಟಕಲನ ಶ್ರೀ ಶಾಂತವೀರ ಶಿವಾಚಾರ್ಯರು, ಬೇಲೂರನ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೇಲೂರನ ಶ್ರೀ ಪಂಚಾಕ್ಷರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಮ್ಮೇಳನದ ಸರ್ವಾಧ್ಯಕ್ಷ ಚಿಂತಕ ಡಾ| ಅರ್ಜುನ ಗೊಳಸಂಗಿ ಹಾಗೂ ಪ್ರಮುಖರು ಇದ್ದರು. ಸೂರ್ಯಕಾಂತ ಅಡಕೆ ಸ್ವಾಗತಿಸಿದರು. ಶರಣಬಸಪ್ಪ ಬಿರಾದಾರ ನಿರೂಪಿಸಿದರು.