ಆಳಂದ: ಬಸವಾದಿ ಶರಣರ ಸಮಕಾಲಿನ ಶರಣ ವಕ್ಕಲಿಗ ಮದ್ದಣ್ಣನವರು ನೀಡಿದ ವೈಜ್ಞಾನಿಕ ಕೃಷಿ ಕಾಯಕ ಸಂದೇಶ ಈಗ ಪ್ರಸ್ತುತವಾಗಿದೆ ಎಂದು ರಾಷ್ಟ್ರೀಯ ಬಸವದಳದ ಮುಖಂಡ ಶರಣ ಧರ್ಮಣ್ಣ ಪೂಜಾರಿ ಹೇಳಿದರು.
ತಾಲೂಕಿನ ವಿ.ಕೆ.ಸಲಗರ ಗ್ರಾಮದ ಮಲ್ಲಿಕಾರ್ಜುನ ಸರಡೆ ಅವರ ಹೊದಲ್ಲಿ ಎಳ್ಳ ಅಮಾವಾಸ್ಯೆ ಆಚರಣೆ ಹಾಗೂ ಶರಣ ಒಕ್ಕಲಿಗ ಮುದ್ದಣ್ಣನವರ ಜಯಂತಿ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಶರಣರು ವೈಜ್ಞಾನಿಕ ತತ್ವ ಮತ್ತು ಆಧ್ಯಾತ್ಮಿಕವಾಗಿ ಜನಸಾಮಾನ್ಯರಿಗೆ ವಚನಗಳ ಮೂಲಕ ನಡೆ, ನುಡಿ ಬೋ ಧಿಸಿದ್ದಾರೆ. ವಿಜ್ಞಾನ, ಕೃಷಿ, ಆರ್ಥಿಕ, ಸಾಮಾಜಿಕ ರಾಜಕೀಯ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾಜ ಮುನ್ನಡೆಸುವ ಬಗ್ಗೆ ವಚನಗಳ ಮೂಲಕ ಸಂವಿಧಾನ ನೀಡಿದ್ದಾರೆ.ಶರಣರ ಸಂವಿಧಾನದಂತೆ ಸಮಾಜ ಮುನ್ನಡೆದರೆ ಭಾರತ ವಿಶ್ವಶ್ರೇಷ್ಠ ರಾಷ್ಟ್ರವಾಗಲಿದೆ ಎಂದು ಹೇಳಿದರು.
ಅನ್ನ ದೇವರ ಮುಂದೆ, ಇನ್ನೂ ದೇವರು ಉಂಟೆ, ಅನ್ನವ ಇರುವತನಕ ಜಗದೊಳ ಪ್ರಾಣ. ಅನ್ನವೇ ದೇವರು ಎಂದ ಸರ್ವಜ್ಞ ಹೇಳಿದಂತೆ ಅನ್ನ ಬೆಳೆಯುವ ರೈತರಿಗೆ ಮುಂದಿನ ದಿನಗಳಲ್ಲಿ ಎಲ್ಲಿಲ್ಲದ ಬೇಡಿಕೆ ಬರಲಿದೆ. ಸರ್ಕಾರ ಅನ್ನ ಬೆಳೆಯುವ ರೈತನಿಗೆ ಎಲ್ಲ ಸಹಾಯ ಸಹಕಾರ ನೀಡಬೇಕು ಎಂದು ಹೇಳಿದರು. ಶರಣ ಸಿದ್ಧರಾಮ ಯಳವಂತಗಿ ವಚನ ಪ್ರಾರ್ಥನೆ ನಡೆಸಿಕೊಟ್ಟರು.
ಶಿವರಾಜ ಕರಹರಿ, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಮೋಹನ ಕಟ್ಟಿಮನಿ, ಮುಖಂಡ ಶಿವುಪುತ್ರ ಮುಂಗಾಣೆ, ಶಿವಾನಂದ ದಂಡೆ, ಜಗದೇವಿ ಧುತ್ತರಗಾಂವ, ಬಸವಕಲ್ಯಾಣದ ಬಸವಲಿಂಗ ಸುಬೇದಾರ, ಶಿವುಕುಮಾರ ನಾಡಗೌಡ, ಸುತ್ತಮುತ್ತಲಿನ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು. ಕಲ್ಯಾಣಿ ತುಕಾಣೆ ತಡಕಲ್ ಅವರು ಹಂತಿ ಪದ ಹಾಗೂ ಜಾನಪದ ಗೀತೆಗಳ ಮೂಲಕ ಎಳ್ಳ ಅಮಾವಾಸ್ಯೆ ಹಬ್ಬ ಹಾಗೂ ಶರಣ ವಕ್ಕಲಿಗ ಮುದ್ದಣ್ಣನವರು ಕೃಷಿಗೆ ನೀಡಿದ ಕೊಡುಗೆ ವಿವರಿಸಿದರು. ಶಿವಪುತ್ರ ಮಂಗಾಣೆ ಸ್ವಾಗತಿಸಿದರು. ಕ್ಷೇಮ ಲಿಂಗ ಬಿರಾದಾರ ವಂದಿಸಿದರು.