ಬೆಂಗಳೂರು: ಮಕರ ಸಂಕ್ರಾಂತಿಯ ವಿಶೇಷ ಶುಭದಿನದಂದು ಸೂರ್ಯ ತನ್ನ ಪಥ ಬದಲಿಸುವ ಸಂದರ್ಭದಲ್ಲಿ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದಲ್ಲಿ ಕಿಟಕಿಯ ಮೂಲಕ ಸೂರ್ಯನ ಕಿರಣಗಳು ಪ್ರವೇಶಿಸಿ ಶಿವಲಿಂಗವನ್ನು ಸ್ಪರ್ಶಿಸಿ, ನಂದಿ ವಿಗ್ರಹದ ಮೂಲಕ ಹಾದು ಹೋದ ವಿಸ್ಮಯಕ್ಕೆ ಶನಿವಾರ ಸಾವಿರಾರು ಭಕ್ತರು ಸಾಕ್ಷಿಯಾದರು.
ಶುಕ್ರವಾರ 5.19ಕ್ಕೆ ಸರಿಯಾಗಿ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಿಸಿದ ಸಂದರ್ಭ ಗವಿಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸಿತು. ಈ ವಿಸ್ಮಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.
ಈಶ್ವರನನ್ನು ಸ್ಪರ್ಶಿಸುವ ಸೂರ್ಯ ಕಿರಣದ ವೀಕ್ಷಣೆಗಾಗಿ ಸಾವಿರಾರು ಭಕ್ತರು ಗವಿಗಂಗಾಧರೇಶ್ವರನ ಆವರಣದಲ್ಲಿ ನೆರದಿದ್ದರು.
ಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶದ ಕ್ಷಣದ ವೀಕ್ಷಣೆಗಾಗಿ ದೇಗುಲದ ಆವರಣದಲ್ಲಿ ಬಿಗ್ ಸ್ಕ್ರೀನ್ ಗಳ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ವಿಸಮಯವನ್ನು ಕಣ್‌ತುಂಬಿಕೊಂಡು ಪುನೀತರಾದರು.