Advertisement

ನಾಮನಿರ್ದೇಶಿತರ ನೇಮಕದಲ್ಲೂ ಅಚ್ಚರಿ?

02:34 AM Jun 28, 2020 | Sriram |

ಬೆಂಗಳೂರು: ವಿಧಾನಪರಿಷತ್‌ಗೆ ನಾಮ ನಿರ್ದೇಶನದಲ್ಲೂ ರಾಜ್ಯ ಬಿಜೆಪಿ ಸರಕಾರ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಲಿದೆಯೇ?

Advertisement

ರಾಜ್ಯಸಭೆ ಮತ್ತು ವಿಧಾನ ಪರಿಷತ್‌ನ ಆಯ್ದ ಸ್ಥಾನಗಳಿಗೆ ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿ ಈಗಲೂ ಅದೇ ದಾರಿ ತುಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಒಂದು ಅಥವಾ ಎರಡು ಸ್ಥಾನಗಳಿಗೆ ಅಚ್ಚರಿಯ ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.

ಈ ಸಂಬಂಧ ಪಕ್ಷದ ಆಂತರಿಕ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ. ಒಟ್ಟು ಐದು ನಾಮನಿರ್ದೇಶಿತ ಸದಸ್ಯರ ನೇಮಕ ಪೈಕಿ 3 ಸ್ಥಾನಗಳಿಗೆ ಪಕ್ಷ ಸೂಚಿಸಿ ದವರನ್ನು ಪರಿಗಣಿಸಿದರೆ ಉಳಿದೆರಡು ಸ್ಥಾನಗಳನ್ನು ಸಿಎಂ ಯಡಿಯೂರಪ್ಪ ಮತ್ತು ಇತರ ನಾಯಕರು ಚರ್ಚಿಸಿ ನೇಮಕ ಮಾಡುವ ಸಂಭವವಿದೆ. ಪಕ್ಷದ ವತಿಯಿಂದ ನೇಮಕವಾಗುವವರ ಪೈಕಿ ಒಂದೆರಡು ಅಚ್ಚರಿಯ ಆಯ್ಕೆ ಇರುವ ನಿರೀಕ್ಷೆ ಇದೆ.

ಈಗ ಪಕ್ಷ ಸಂಘಟನೆಯೊಂದಿಗೆ ನೇರ ಇಲ್ಲವೇ ಪರೋಕ್ಷವಾಗಿ ನಂಟು ಹೊಂದಿರುವ ಅಥವಾ ಪಕ್ಷದ ಸಿದ್ಧಾಂತದ ಪರವಾಗಿರುವ ಮತ್ತು ಮೃದು ಧೋರಣೆಯಿರುವ ಜತೆಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಪರಿಗಣಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಸರಕಾರ ರಚನೆಗೆ ತೆರೆಮರೆಯಲ್ಲಿ ಶ್ರಮಿಸಿದ್ದರೂ ಈವರೆಗೆ ಸೂಕ್ತ ಸ್ಥಾನಮಾನ ಸಿಗದವರ ಪೈಕಿ ಒಬ್ಬರನ್ನು ನೇಮಕ ಮಾಡುವ ಸಂಭವವಿದೆ.

Advertisement

ಜುಲೈಯಲ್ಲಿ ನೇಮಕ
ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಸಿಎಂ ಯಡಿಯೂರಪ್ಪ ಜತೆ ಒಂದು ಸುತ್ತು ಚರ್ಚೆ ನಡೆಸಲಿದ್ದಾರೆ. ಬಳಿಕ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿ ಬಳಿಕವಷ್ಟೇ ವರಿಷ್ಠರಿಗೆ ಸಂಭಾವ್ಯರ ಹೆಸರು ರವಾನಿಸಲಾಗುತ್ತದೆ. ಜುಲೈ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ನೇಮಕ ಪ್ರಕ್ರಿಯೆ ನಡೆಯಬಹುದು. ಆಷಾಢ ಮಾಸವೆಂಬ ಕಾರಣಕ್ಕೆ ನೇಮಕ ಮುಂದೂಡುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಪಕ್ಷದ ವರ್ಚಸ್ಸು ವೃದ್ಧಿ
ರಾಜ್ಯಸಭೆ, ವಿಧಾನ ಪರಿಷತ್‌ನಂತಹ ಪ್ರತಿಷ್ಠಿತ ಸ್ಥಾನಗಳಿಗೆ ಪಕ್ಷಕ್ಕಾಗಿ ದುಡಿದ ಸಾಮಾನ್ಯರನ್ನು ಆಯ್ಕೆ ಮಾಡಿದ ಪಕ್ಷದ ನಿಲುವಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನ್ಯ ಪಕ್ಷಗಳ ಮುಖಂಡರೂ ಮೆಚ್ಚುಗೆ ಸೂಚಿಸುತ್ತಿದ್ದು, ಒಟ್ಟಾರೆ ಪಕ್ಷದ ವರ್ಚಸ್ಸು ವೃದ್ಧಿಸುತ್ತಿದೆ. ಹಾಗಾಗಿ ನಾಮನಿರ್ದೇಶಿತರ ಆಯ್ಕೆಯಲ್ಲೂ ಅಪರೂಪದ ಸಾಧಕರನ್ನು ಗುರುತಿಸಿ ಭಿನ್ನ ಪಕ್ಷ ಎಂಬುದನ್ನು ಇನ್ನಷ್ಟು ಗಟ್ಟಿಪಡಿಸಲು ಪಕ್ಷದ ನಾಯಕರು ಮುಂದಾಗಬಹುದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next