ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ 3 ಉಪಗ್ರಹ ಹೊತ್ತ ಬಾಹ್ಯಾಕಾಶ ನೌಕೆ ಈಗಾಗಲೇ ಚಂದ್ರನ ಅಂಗಳದತ್ತ ದಾಪುಗಾಲಿಟ್ಟಿದೆ. ಆಗಸ್ಟ್ 24ರಂದು ಚಂದ್ರಯಾನ 3 ನೌಕೆ ಸೌತ್ ಪೋಲ್ (ದಕ್ಷಿಣ ಧ್ರುವ) ನಲ್ಲಿ ಇಳಿಯಲಿದೆ. ಏತನ್ಮಧ್ಯೆ ಭಾರತದ ಇತಿಹಾಸದಲ್ಲಿಯೇ ಎಂದೂ ಮರೆಯಲಾಗದ ಅಧ್ಯಾಯವನ್ನು ಸೃಷ್ಟಿಸಿದ್ದ ರಾಕೇಶ್ ಶರ್ಮಾ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಮೂಡಿಸಿದೆ.
ಹೌದು ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1984ರಲ್ಲಿ ಸೋವಿಯತ್ ಬಾಹ್ಯಾಕಾಶ ನೌಕೆ ಸೂಯಜ್ ಟಿ-11ರಲ್ಲಿ ಪ್ರಯಾಣಿಸಿದ್ದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶದಲ್ಲಿ ಏಳು ದಿನ, 21 ಗಂಟೆ 40 ನಿಮಿಷಗಳ ಕಾಲ ಯಶಸ್ವಿಯಾಗಿ ಕಳೆದು ವಾಪಸ್ ಬರುವ ಮೂಲಕ ದೇಶಕ್ಕೆ ಹೆಮ್ಮೆಯನ್ನು ತಂದಿದ್ದರು.
ರಾಕೇಶ್ ಶರ್ಮಾ ಬಾಹ್ಯಾಕಾಶ ಯಾನ:
ರಾಕೇಶ್ ಶರ್ಮಾ ಅವರು 1949ರ ಜನವರಿ 13ರಂದು ಪಂಜಾಬ್ ಪ್ರಾಂತ್ಯದ ಪಟಿಯಾಲಾ ನಗರದಲ್ಲಿ ಜನಿಸಿದ್ದರು. ಭಾರತೀಯ ವಾಯುಸೇನೆಯಲ್ಲಿ ವೈಮಾನಿಕ ಪರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ ಅವರು 1982ರ ಸೆಪ್ಟೆಂಬರ್ 20ರಂದು ಅಂತರಿಕ್ಷಯಾನಿಯಾಗಿ ಆಯ್ಕೆಯಾಗಿದ್ದರು.
ಕಠಿನ ಆಯ್ಕೆ ಪ್ರಕ್ರಿಯೆ ನಂತರ ರಾಕೇಶ್ ಶರ್ಮಾ ಮತ್ತು ವಿಂಗ್ ಕಮಾಂಡರ್ ರವೀಶ್ ಮಲ್ಹೋತ್ರಾ ಆಯ್ಕೆಯಾಗಿ ರಷ್ಯಾದ ಯೂರಿ ಗಗಾರಿನ್ ಕೇಂದ್ರದಲ್ಲಿ ಮತ್ತು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಅಂತರಿಕ್ಷಯಾನಕ್ಕಾಗಿ ತರಬೇತಿ ಪಡೆದಿದ್ದರು.
ಅಂತಿಮವಾಗಿ ರಾಕೇಶ್ ಶರ್ಮಾ ಅವರನ್ನು ಅಂತರಿಕ್ಷಯಾನ ಮಾಡುವ ವ್ಯಕ್ತಿ ಎಂದು ಆಯ್ಕೆ ಮಾಡಿದ್ದು, ಅವರ ಬದಲಿಯಾಗಿ (ಆಕಸ್ಮಿಕ ಸಂದರ್ಭದಲ್ಲಿ) ರವೀಶ್ ಮಲ್ಹೋತ್ರಾ ಎಂದು ನಿರ್ಧರಿಸಲಾಗಿತ್ತು. ಎಲ್ಲಾ ತರಬೇತಿ, ದೇಹದಾರ್ಢ್ಯತೆ ಪರೀಕ್ಷೆಯ ಬಳಿಕ 1984ರ ಏಪ್ರಿಲ್ 3ರಂದು ಸೋವಿಯತ್ ಗಗನಯಾತ್ರಿ ಯೂರಿ ಮ್ಯಾಲಶ್ಚೇವ್ ನೇತೃತ್ವದಲ್ಲಿ ಗೆನಡಿ ಸ್ಟ್ರೇಕ್ ಲೋವ್ ಜೊತೆ ರಾಕೇಶ್ ಶರ್ಮಾ ಕಜಕಿಸ್ಥಾನದಲ್ಲಿರುವ ಬೈಕನೌರ್ ಅಂತರಿಕ್ಷಾ ಉಡಾವಣಾ ಕೇಂದ್ರದಿಂದ ಸೂಯಜ್ ಟಿ-11 ಏರಿ ಸಲ್ಯೂಟ್ 7 ಅಂತರಿಕ್ಷ ನಿಲ್ದಾಣ ತಲುಪಿದ್ದರು.
ತಮ್ಮ 35ನೇ ವಯಸ್ಸಿನಲ್ಲಿ ಅಂತರಿಕ್ಷಯಾನ ಮಾಡಿ ಬಾಹ್ಯಾಕಾಶ ನಿಲ್ದಾಣ ಸೇರಿದ್ದ ಶರ್ಮಾ 7 ದಿನ 21 ಗಂಟೆಗಳ ಕಾಲ ಅಲ್ಲಿ ಹಲವಾರು ಪ್ರಯೋಗ ಮತ್ತು ಛಾಯಾಗ್ರಹಣ ನಡೆಸಿ, 1984ರ ಏಪ್ರಿಲ್ 11ರಂದು ಭೂಮಿಗೆ ವಾಪಸ್ ಆಗಿದ್ದರು.
ಬಾಹ್ಯಾಕಾಶದ ಬಗ್ಗೆ ಶರ್ಮಾ ಉತ್ತರ:
ಬಾಹ್ಯಾಕಾಶ ಪ್ರಯಾಣದಿಂದ ವಾಪಸ್ ಆದ ನಂತರ ರಾಕೇಶ್ ಶರ್ಮಾ ಅವರು ಅಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಜತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭದಲ್ಲಿ, ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ಗಾಂಧಿ ಪ್ರಶ್ನಿಸಿದ್ದರು. ಆಗ ಕವಿ ಮುಹಮ್ಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಛಾ ಹಿಂದೂಸಥಾನ್ ಹಮಾರ (ಎಲ್ಲಾ ದೇಶಕ್ಕಿಂತ ಹಿಂದೂಸ್ಥಾನ ಶ್ರೇಷ್ಠ) ಸಾಲನ್ನು ಉದ್ಘರಿಸಿದ್ದು ಜನಪ್ರಿಯವಾಗಿತ್ತು.
ರಾಕೇಶ್ ಶರ್ಮಾ ಈಗ ಎಲ್ಲಿದ್ದಾರೆ?
1970ರಲ್ಲಿ ಭಾರತೀಯ ವಾಯುಪಡೆ (IAF) ಸೇರಿದ್ದ ರಾಕೇಶ್ ಶರ್ಮಾ ಅವರು ಆರಂಭಿಕ ಹಂತದಲ್ಲಿ ಟೆಸ್ಟ್ ಪೈಲಟ್ ಆಗಿದ್ದರು. 1984ರಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಭಡ್ತಿ ಪಡೆದಿದ್ದರು. 1971ರಲ್ಲಿ ಬಾಂಗ್ಲಾದೇಶ ಲಿಬರೇಶನ್ ಯುದ್ಧದಲ್ಲಿ ಶರ್ಮಾ ಅವರು ಮಿಗ್ 21 ಪೈಲಟ್ ಆಗಿ ಕಾರ್ಯನಿರ್ವಹಿಸುವ ಮೂಲಕ ತಮ್ಮ ಕೌಶಲ್ಯತೆ ಮೆರೆದಿದ್ದರು.
1987ರಲ್ಲಿ ವಿಂಗ್ ಕಮಾಂಡರ್ ಆಗಿದ್ದ ರಾಕೇಶ್ ಶರ್ಮಾ ಅವರು ನಿವೃತ್ತಿಯಾಗಿದ್ದರು. ನಂತರ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಚೀಫ್ ಟೆಸ್ಟ್ ಪೈಲಟ್ ಆಗಿ ಸೇರ್ಪಡೆಗೊಂಡಿದ್ದರು.
2001ರಲ್ಲಿ ನಿವೃತ್ತಿ ಪಡೆದ ನಂತರ ರಾಕೇಶ್ ಶರ್ಮಾ ಮಾಧ್ಯಮಗಳಿಂದ ದೂರ ಉಳಿದು ತಮಿಳುನಾಡಿನ ಕೂನೂರ್ ನಲ್ಲಿ ಪತ್ನಿ ಮಧು ಜೊತೆ ಸರಳ ಜೀವನ ನಡೆಸುತ್ತಿದ್ದಾರೆ. ಗಾಲ್ಫ್, ತೋಟಗಾರಿಕೆ, ಯೋಗ, ಪುಸ್ತಕ ಓದುವುದು ಹಾಗೂ ಪ್ರವಾಸ ಹೀಗೆ ತಮ್ಮ ಹವ್ಯಾಸದೊಂದಿಗೆ ಶರ್ಮಾ ಅವರು ಕಾಲಕಳೆಯುತ್ತಿದ್ದಾರೆ.