ಅಪ್ಪನಿಗೆ, ಹುಬ್ಬಳ್ಳಿಗೆ ವರ್ಗವಾಗಿದ್ದ ಹೊಸತು. ಚಿತ್ರದುರ್ಗ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳನ್ನು ಮಾತ್ರ ನೋಡಿದ್ದ ನಮಗೆ, ಹುಬ್ಬಳ್ಳಿಯ ಜನರ ಭಾಷೆ, ಊರು ಹೊಂದಿಕೊಳ್ಳಲು ಸ್ವಲ್ಪ ಕಷ್ಟ ಎನಿಸಿತ್ತು. ನನಗೆ ಹಾಗೂ ತಂಗಿಗೆ ಬಾಸೆಲ್ ಮಿಶನ್ ಕನ್ನಡ ಮೀಡಿಯಮ್ ಶಾಲೆಗೆ ಸೇರಿಸಿದ್ದರು. ಮೊದಲ ದಿನ ಅಳುಕುತ್ತಲೇ ಶಾಲೆಗೆ ಕಾಲಿಟ್ಟಿದ್ದೆ. ಸಹಪಾಠಿಯೊಬ್ಬಳು ನಿನ್ನ ಹೆಸರೇನು ಎಂದಾಗ, “ನಳಿನಿ’ ಎಂದಿದ್ದೆ.
ಅದಕ್ಕೆ ಆಕೆ, ನನ್ನ ಹೆಸರು ಸರೋಜಿನಿ ಸುರೇಬಾನ ಎಂದು ಹೇಳಿ, ನಿನ್ನ ಸರ್‌ನೇಮ್ ಏನು ಎಂದಳು. ಹಾಗೆಂದರೇನು ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದೆ. ಮತ್ತೂಮ್ಮೆ ಆಕೆ ಕೇಳಿದಾಗ, ನಾನು ದುರ್ಗದ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಗಣಿತ ಸಾರ್, ಸಮಾಜ ಸಾರ್ (ನಾವು ಸರ್ ಅಲ್ಲ, ಸಾರ್ ಅಂತಾನೇ ಅಂತಿದ್ವಿ) ಮೇಷ್ಟುಗಳ ಹೆಸರು ಕೇಳುತ್ತಿರಬೇಕು ಎಂದುಕೊಂಡು, ಯಾವ ಸಾರ್ ಹೆಸರು ಹೇಳಬೇಕು ಎಂದು ಕೇಳಿದೆ.
ಆಕೆ ನನ್ನನ್ನು ವಿಚಿತ್ರ ಪ್ರಾಣಿ ಎನ್ನುವಂತೆ ನೋಡಿದ್ದಳು. ಶಿಕ್ಷಕರು ಅಟೆಂಡೆನ್ಸ್ ತೆಗೆದುಕೊಳ್ಳುವಾಗ ಮತ್ತೆ ಇದೇ ಸಮಸ್ಯೆ. ನಳಿನಿ ಟಿ. ಅಂತ ಇನ್ಷಿಯಲ್ ಸಮೇತ ಕೂಗಿದರು. ಎದ್ದು ನಿಂತು, ಬಲಗೈಯನ್ನು ಹಣೆಗೆ ಹಚ್ಚಿ ಪ್ರಸೆಂಟ್ ಸಾರ್ ಎನ್ನುತ್ತಿದ್ದಂತೆ- ಎಲ್ಲರೂ ನಗತೊಡಗಿದರು. ಶಿಕ್ಷಕರು, ನಿನ್ನ ಹೆಸರಿನಲ್ಲಿರುವ “ಟಿ’ ಅಂದರೆ ಏನು ಎಂದರು. ಅದು ಅಪ್ಪನ ಹೆಸರು, ತಿಪ್ಪೇಸ್ವಾಮಿ ಎಂದೆ.
ಸರಿ, ಅಂದಿನಿಂದ ನನ್ನ ಅಡ್ಡಹೆಸರು ಆ ಶಾಲೆಯಲ್ಲಿ ಎರಡು ವರ್ಷ ಓದುವ ತನಕ, ಶಿಕ್ಷಕರ ಬಾಯಲ್ಲಿ ತಿಪ್ಪೇ ಸ್ವಾಮಿ ಅಂತಾನೇ ಆಗಿಹೋಗಿತ್ತು. ಈಗಲೂ ಶಾಲಾ ದಿನಗಳು ಅಂದರೆ ಈ ಪ್ರಸಂಗ ನೆನಪಾಗುತ್ತದೆ.
* ನಳಿನಿ ಟಿ. ಭೀಮಪ್ಪ