Advertisement

ಆರ್‌.ಡಿ.ಪಾಟೀಲ್‌ ಹೇಳಿಕೆ ಬಗ್ಗೆ ತನಿಖೆಗೆ ಸುರ್ಜೇವಾಲಾ ಆಗ್ರಹ

07:41 PM Jan 25, 2023 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಸರಕಾರ ಎಂದರೆ ಸರಕಾರಿ ಹುದ್ದೆ ಮಾರಾಟ ಮಾಡುವ ಮಂಡಿಯಂತಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಅಕ್ರಮದ ಕಿಂಗ್‌ಪಿನ್‌ ಆರ್‌. ಡಿ. ಪಾಟೀಲ್‌, ತಮ್ಮ ಪ್ರಕರಣ ಮುಚ್ಚಿಹಾಕಲು ಸಿಐಡಿ ಡಿವೈಎಸ್‌ಪಿ 3 ಕೋಟಿ ರೂ. ಲಂಚ ಕೇಳಿ 76 ಲಕ್ಷ ರೂ. ಪಡೆದಿದ್ದಾರೆ ಎಂದು ಸಾಕ್ಷ್ಯ ಸಮೇತ ಲೋಕಾಯುಕ್ತರಿಗೆ ದೂರು ನೀಡಿರುವುದು ಬಿಜೆಪಿ ಸರಕಾರದಲ್ಲಿ ನಡೆಯುತ್ತಿರುವ ಹಗರಣಕ್ಕೆ ಸಾಕ್ಷಿ ಎಂದು ದೂರಿದರು.

ಈ ಹಗರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ಪೊಲೀಸರನ್ನು ದಬ್ಬಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಅಲ್ಲದೆ ಆತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ. ಈಗ ಒಂದು ಪತ್ರ ಬೆಳಕಿಗೆ ಬಂದಿದ್ದು, ಇದರಲ್ಲಿ ಪ್ರಕರಣದ ತನಿಖಾಧಿಕಾರಿ 3 ಕೋಟಿ ರೂ. ಲಂಚದ ಬೇಡಿಕೆ ಇಟ್ಟಿದ್ದು, ಅದರಲ್ಲಿ 76 ಲಕ್ಷ ರೂ. ಅನ್ನು ನೀಡಿದ್ದೇನೆ ಎಂದು ಹೇಳಿದ್ದಾನೆ. ಇಡೀ ಹಗರಣವನ್ನು ಮುಚ್ಚಲು ಈ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮೂಗಿನ ಕೆಳಗೆ ಇದೆಲ್ಲವೂ ಆಗುತ್ತಿದ್ದು ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಸಿಎಂ ಹುದ್ದೆಯ ಹೆಸರನ್ನು ಬದಲಿಸಬೇಕಿದೆ. ರಾಜ್ಯದಲ್ಲಿ ಸರಕಾರಿ ಹುದ್ದೆಗಳನ್ನು ಹೆಚ್ಚು ಮೊತ್ತ ನೀಡಿದವರಿಗೆ ಹರಾಜು ಮಾಡಲಾಗುತ್ತಿದೆ. ಇದು ಸರಕಾರಿ ಉದ್ಯೋಗಗಳು ಮಾರಾಟವಾಗುವ ಮಂಡಿ ಮಾರುಕಟ್ಟೆಯಂತಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರಕಾರದಿಂದ ನ್ಯಾಯಯುತ ತನಿಖೆ ಅಸಾಧ್ಯ. ಈ ಪ್ರಕರಣದ ತನಿಖಾಧಿಕಾರಿಗಳನ್ನು ತನಿಖೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತದೆ ಎಂದು ಹೇಳಿದರು.

Advertisement

ಡಿ.ಕೆ.ಶಿವಕುಮಾರ್‌ ಮಾತನಾಡಿ, ಈ ಪ್ರಕರಣದ ಹಿಂದೆ ಕೇವಲ ಎಸ್‌ಐ ಅಥವಾ ಅಧಿಕಾರಿಗಳು ಮಾತ್ರವಲ್ಲ, ಇಡೀ ವ್ಯವಸ್ಥೆಯೇ ಭಾಗಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದ್ದರು. ಈಗ ಪ್ರಮುಖ ಆರೋಪಿಯೇ ಪ್ರಕರಣದ ತನಿಖಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಾರೆಲ್ಲ ಆರೋಪಿಗಳನ್ನು ಮುಕ್ತಗೊಳಿಸಲು ಎಷ್ಟು ವಸೂಲಿ ಮಾಡಲಾಗಿದೆ ಎಂಬುದರ ಬಗ್ಗೆ ಲೋಕಾಯುಕ್ತದಿಂದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಕೆಲವರು ಮಂತ್ರಿಗಳ ಹೆಸರು ಹೇಳಿದರೆ, ಮತ್ತೆ ಕೆಲವರು ಗೃಹ ಸಚಿವರು, ಮುಖ್ಯಮಂತ್ರಿಗಳು, ಡಿಜಿಪಿ ಹೆಸರು ಹೇಳುತ್ತಿದ್ದಾರೆ. ಬಂಧನವಾಗಿರುವ ಐಪಿಎಸ್‌ ಅಧಿಕಾರಿಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ಆರ್‌.ಡಿ. ಪಾಟೀಲ್‌ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದು ಪೊಲೀಸ್‌ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿ. ಗೃಹಸಚಿವರು ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು.
– ರಣದೀಪ್‌ ಸಿಂಗ್‌ ಸುರ್ಜೇವಾಲಾ

Advertisement

Udayavani is now on Telegram. Click here to join our channel and stay updated with the latest news.

Next