Advertisement

ಸೂರ್ಗೋಳಿ ಶಾಲೆ : ಪಠ್ಯದೊಂದಿಗೆ ‘ಪ್ರಕೃತಿ’ಪಾಠ

08:10 PM Jan 03, 2019 | Karthik A |

ವಿಶೇಷ ವರದಿ : ಗೋಳಿಯಂಗಡಿ: ಇಲ್ಲಿ ಕೇವಲ ಪಠ್ಯ ಮಾತ್ರ ಕಲಿಸುವುದಲ್ಲ. ಪರಿಸರ, ಪ್ರಕೃತಿಯ ಕುರಿತು, ಔಷಧ ಸಸ್ಯಗಳು, ರಾಸಾಯನಿಕ ಗೊಬ್ಬರದ ದುಷ್ಪರಿಣಾಮ, ಸಾವಯವ ಗೊಬ್ಬರದ ಪ್ರಯೋಜನದ ಬಗೆಗಿನ ಪಾಠವನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಹೌದು ಇದು ಕುಂದಾಪುರ ವಲಯದ ಬೆಳ್ವೆ ಗ್ರಾಮದ ಸೂರ್ಗೋಳಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನಡೆಯುತ್ತಿರುವ ವಿಭಿನ್ನ ಪಠ್ಯೇತರ ಚಟುವಟಿಕೆಗಳು. ಮಕ್ಕಳಿಗೆ ಎಳವೆಯಲ್ಲಿಯೇ ಪರಿಸರದ (ಪ್ರಕೃತಿ) ಕುರಿತು ಕಾಳಜಿ ಮೂಡಿಸುವ ಉದ್ದೇಶದಿಂದ ಪಾಠದೊಂದಿಗೆ ತರಕಾರಿ ತೋಟ, ಔಷಧ ವನಗಳನ್ನು ಬೆಳೆಸಲಾಗುತ್ತಿದೆ.

Advertisement

60 ವರ್ಷಕ್ಕೆ 60 ಸಸಿ
ಈ ಶಾಲೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಬಾರಿ ಅದರ ನೆನಪಿಗಾಗಿ ಮಾವು, ಗೇರು, ಸಾಗುವನಿ ಸಹಿತ ಒಟ್ಟು 60 ವಿವಿಧ ತಳಿಯ ಗಿಡಗಳನ್ನು ನೆಡಲಾಗಿತ್ತು. ಮಕ್ಕಳೇ ಅದಕ್ಕೆ ನೀರು ಹಾಕಿ, ಪೋಷಣೆ ಮಾಡುತ್ತಿದ್ದಾರೆ.

ಹಿಂದಿನ ವರ್ಷಗಳವರೆಗೆ ತರಕಾರಿ ತೋಟ ಮಾತ್ರವಿದ್ದು, ಈ ವರ್ಷದಿಂದ ಹೊಸದಾಗಿ ‘ಪ್ರಕೃತಿ’ ಎನ್ನುವ ಔಷಧ ವನವನ್ನು ರಚನೆ ಮಾಡಲಾಗಿದೆ. ಇಲ್ಲಿ ಸುಮಾರು 50 ವಿವಿಧ ಜಾತಿಯ ಔಷಧೀಯ ಗುಣಗಳಿರುವ ಸಸ್ಯಗಳನ್ನು ನೆಡಲಾಗಿದೆ. ಒಂದು ಜೇನುಗೂಡನ್ನು ಕೂಡ ತರಿಸಲಾಗಿದ್ದು, ಅದರಲ್ಲಿ ಕೃಷಿಯ ಜತೆ – ಜತೆಗೆ ಜೇನು ಸಾಕಣೆ ಕೃಷಿಯನ್ನು ಕಲಿಸಿಕೊಡಲಾಗುತ್ತಿದೆ.

ಸೂರ್ಗೋಳಿಯ ಈ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಒಟ್ಟು 92 ವಿದ್ಯಾರ್ಥಿಗಳಿದ್ದಾರೆ. ಐವರು ಶಿಕ್ಷಕರು ಸಹಿತ ಮುಖ್ಯ ಶಿಕ್ಷಕರಿದ್ದಾರೆ. ಮುಖ್ಯವಾಗಿ 5ರಿಂದ 7ನೇ ತರಗತಿವರೆಗಿನ ಮಕ್ಕಳು ಈ ‘ಕೃಷಿ’ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ತರಕಾರಿ ತೋಟ, ಔಷಧ ವನ, ಶಾಲೆಯ ಕಾಂಪೌಂಡ್‌ ಬಳಿ ವಿವಿಧ ಸಸಿಗಳನ್ನು ನೆಡಲಾಗಿದ್ದು, ಅದರ ಪಾಲನೆ – ಪೋಷಣೆ ಎಲ್ಲವನ್ನೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳೇ ನೋಡಿ ಕೊಳ್ಳುತ್ತಿದ್ದಾರೆ.

ಸತತ 3ನೇ ವರ್ಷ ಪ್ರಶಸ್ತಿ
ಈ ಶಾಲೆಯ ‘ಪರಿಸರ ಸ್ನೇಹಿ’ ಕಾರ್ಯಕ್ರಮಗಳನ್ನು ಪರಿಗಣಿಸಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡ ಮಾಡುವ ‘ಪರಿಸರ ಮಿತ್ರ’ ಪ್ರಶಸ್ತಿಗೆ ಕಳೆದ 3 ವರ್ಷಗಳಿಂದ ಪಾತ್ರವಾಗುತ್ತಿದ್ದು, ಈ ಬಾರಿಯೂ ಸಿಗುವ ನಿರೀಕ್ಷೆಯಲ್ಲಿದೆ.

Advertisement

ಮಾಹಿತಿ ನಮಗೆ ಗೊತ್ತಿದೆ
ನಮಗೆ ಈ ಮೊದಲೆಲ್ಲ ಕೆಲವು ಔಷಧ ಸಸ್ಯಗಳನ್ನು ನೋಡಿದರೂ ಅದು ಯಾವುದಕ್ಕೆ ಆಗುತ್ತದೆ, ಅದರ ಹೆಸರೇನೆಂದು ಗೊತ್ತಿರಲಿಲ್ಲ. ಆದರೆ ಈಗ ಅವೆಲ್ಲದರ ಮಾಹಿತಿ ನಮಗೆ ಗೊತ್ತಿದೆ. ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ತುಂಬಾ ಖುಷಿಯಾಗುತ್ತಿದೆ.
– ಅನೀಶ್‌ ಮತ್ತು ಸುಲೇಖಾ, ವಿದ್ಯಾರ್ಥಿಗಳು

ಮಕ್ಕಳಿಗೆ ‘ಕೃಷಿ’ ಪಾಠ
ಕೇವಲ ವಿದ್ಯೆಯೊಂದಿದ್ದರೆ ಸಾಲದು, ನಮ್ಮ ಸುತ್ತಮುತ್ತ ನಡೆಯುವ ಚಟುವಟಿಕೆಗಳ ಕುರಿತು ಅರಿವು ಇರಬೇಕು ಎನ್ನುವ ನಿಟ್ಟಿನಲ್ಲಿ ಕೃಷಿಯ ಬಗೆಗಿನ ಕಾಳಜಿ, ಔಷಧ ಸಸ್ಯಗಳ ಕುರಿತ ಮಾಹಿತಿ, ಅವುಗಳ ಬಳಕೆ, ಸಾವಯವ ಗೊಬ್ಬರದಿಂದ ಸಿಗುವ ಲಾಭ, ರಾಸಾಯನಿಕ ಗೊಬ್ಬರದಿಂದಾಗುವ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ.
– ಸದಾನಂದ ನಾಯಕ್‌, ಮುಖ್ಯ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next