ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುವ ಬದಲು ದೇಶದಲ್ಲಿ ಬಡತನ ಹಾಗೂ ನಿರುದ್ಯೋಗದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕಿತ್ತು ಎಂದು ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಎಐಸಿಸಿಯಿಂದ ಬಿಡುಗಡೆಯಾದ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ ಮಾಡಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸಮಸ್ಯೆಗಿಂತ ಪಾಕಿಸ್ತಾದ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಾರೆ. ಕೇಂದ್ರ ಸರ್ಕಾರ ಕಳೆದ ಐದು ವರ್ಷದಲ್ಲಿ ಯಾವುದೇ ಸಾಧನೆ ಮಾಡಿಲ್ಲ. ಬಡವರು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿದೆ. ಹಣ ಮಾಡಿಕೊಂಡವರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಬಡವರು ಕುಟುಂಬಕ್ಕೆ ಊಟ ಹಾಕಲು ಹೆಣಗಾಡುತ್ತಿದ್ದಾರೆ. ಶೇ.70 ರಷ್ಟು ಮಂದಿ ಸರಾಸರಿ 10 ಸಾವಿರ ರೂ. ಮಾತ್ರ ಆದಾಯ ಹೊಂದಿದ್ದಾರೆ. ದೇಶದಲ್ಲಿ ಕೇವಲ ಮಾತಿನಿಂದ ಶಾಸನ ನಡೆಯುವುದಿಲ್ಲ. ಯುಪಿಎ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ಆದರೆ ಈಗ ಐದು ವರ್ಷ ದೇಶ ಮುನ್ನಡೆಸಿದ ಮೋದಿ ಸರ್ಕಾರ ಎಲ್ಲವನ್ನೂ ಹಾಳುಗೆಡವಿದೆ ಎಂದರು.
ಪಕ್ಷದ ಪ್ರಣಾಳಿಕೆಯಲ್ಲಿ 12 ನೇ ತರಗತಿಯವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ವಿಸ್ತರಿಸುವ ಭರವಸೆ ನೀಡಿದ್ದೇವೆ. ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ಲಭಿಸಲಿದೆ. ಸಾಮಾಜಿಕ ನ್ಯಾಯ, ಆರೋಗ್ಯ, ಬಡವರಿಗೆ ಉಚಿತ ಔಷಧ ನೀಡುವ ಭರವಸೆ ನೀಡಿದ್ದೇವೆ. ಈ ಪ್ರಣಾಳಿಕೆಯಿಂದ ನಮ್ಮ ಬದ್ಧತೆ ಹೆಚ್ಚಿದೆ. ಆದ್ದರಿಂದಲೇ ಹೇಳಿದ್ದನ್ನೇ ಮಾಡುತ್ತೇವೆ ಎಂದು ಪ್ರನಾಳಿಕೆಯಲ್ಲಿ ತಿಳಿದ್ದೇವೆ ಎಂದರು.
ಮಹಿಳಾ ಮೀಸಲಾತಿ: ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಅಧೀನದ ಇಲಾಖೆಗಳಲ್ಲಿ ಮಹಿಳೆಯರಿಗೆ ಶೇ33 ರಷ್ಟು ಮೀಸಲಾತಿ ತರಲಿದ್ದೇವೆ. ದೇಶದ ಆರು ಕಡೆ ಸುಪ್ರೀಂ ಕೋರ್ಟ್‌ನ ವಿಶೇಷ ನ್ಯಾಯಾಲಯ ಪೀಠ ಸ್ಥಾಪಿಸುತ್ತೇವೆ. ಪ್ರತಿ ವಲಯದಲ್ಲಿ ನ್ಯಾಯಾಲಯ ಇರುವುದರಿಂದ ಜನರಿಗೆ ದಿಲ್ಲಿಗೆ ಬರುವ ಸಮಸ್ಯೆ ಇರುವುದಿಲ್ಲ. ಗೃಹ ನಿರ್ಮಾಣ, ಜಿಎಸ್ಟಿ ಸರಳೀಕರಣಗೊಳಿಸಿ ಅದರಿಂದ ಬರುವ ಆದಾಯದಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡುತ್ತೇವೆ ಎಂದು ಹೇಳಿದರು.
ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ಸಾಮಾಜಿಕ ನ್ಯಾಯದ ಬದಲು ಅನ್ಯಾಯ ಎಸಗಲಾಗಿದೆ. ಮೋದಿ ಸರ್ಕಾರ ನಡೆದುಕೊಂಡ ರೀತಿಯಿಂದ ಆರ್ಥಿಕ ಕುಸಿತ ಉಂಟಾಗಿದೆ. ನೋಟ್ ಬ್ಯಾನ್‌ನಿಂದ ಸಾಮಾನ್ಯ ಜನರ ಜೀವನಕ್ಕೆ ಹೊಡೆತ ಬಿದ್ದಿದೆ. ಮೋದಿ ಈ ತೀರ್ಮಾನದಲ್ಲಿ ಆರ್ಥಿಕ ಪರಿಸ್ಥಿತಿ ಕುಗ್ಗಿದೆ ಎಂದರು.
ನಮ್ಮ ಪ್ರಣಾಳಿಕೆಯಿಂದ ದೇಶವನ್ನು ಬದಲಾವಣೆ ಮಾಡಲು ಆಗುತ್ತದೆ. ಹಾಗಾಗಿ ಬಡವರಿಗೆ 72 ಸಾವಿರ ರೂ ನೀಡುವ ತೀರ್ಮಾನ ಮಾಡಿದ್ದು. ಸ್ವಾಮಿನಾಥನ್ ವರದಿ ಜಾರಿ, ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ, ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 4ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ. ಇದು ಬರಿ ಬಾಯಿ ಮಾತಲ್ಲ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.