ನವದೆಹಲಿ: ಭಾರತೀಯ ಸೇನಾಪಡೆ 2016ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯಗೊಳಿಸಿದ್ದಲ್ಲದೇ, ಅತಿಯಾದ ಪ್ರಚಾರ ನೀಡಲಾಗಿದೆ ಎಂದು ಸರ್ಜಿಕಲ್ ದಾಳಿಯಲ್ಲಿ ಅಂದು ಪಾಲ್ಗೊಂಡಿದ್ದ ಲೆಫ್ಟಿನೆಂಟ್(ನಿವೃತ್ತ) ಡಿಎಸ್ ಹೂಡಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸೇನಾ ದೃಷ್ಟಿಕೋನದಲ್ಲಿ ದಾಳಿ ತುಂಬಾ ಅಗತ್ಯವಾದದ್ದು, ಆದರೆ ಭಾರತದಲ್ಲಿ ಸರ್ಜಿಕಲ್ ದಾಳಿ ಘಟನೆಯನ್ನು ರಾಜಕೀಯವಾಗಿ ಮತ್ತು ಅತೀಯಾದ ಪ್ರಚಾರದ ಮೂಲಕ ಬಿಂಬಿಸಲಾಯಿತು ಎಂದು ಎಎನ್ ಐ ಜೊತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಉರಿ ಸೆಕ್ಟರ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತೀಯ ಸೇನಾಪಡೆ 2016ರ ಸೆಪ್ಟೆಂಬರ್ 29ರಂದು ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ನೆರೆಯ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿತ್ತು.
ಉರಿ ಸೆಕ್ಟರ್ ಮೇಲೆ ನಡೆದ ದಾಳಿಯಲ್ಲಿ ನಾವು ನಮ್ಮ ಹಲವು ಯೋಧರನ್ನು ಕಳೆದುಕೊಂಡಿದ್ದೇವು. ಈ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ನೀಡಲು ಸರ್ಜಿಕಲ್ ಸ್ಟ್ರೈಕ್ ಮುಖ್ಯವಾಗಿತ್ತು. ಒಂದು ವೇಳೆ ನೀವು ನಮ್ಮ ಗಡಿಯೊಳಗೆ ಬಂದು ಪುಂಡಾಟ ನಡೆಸಿದರೆ ಇಂತಹ ದಾಳಿಯನ್ನು ನಡೆಸುತ್ತೇವೆ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಹೇಳಬೇಕಾಗಿತ್ತು. ಹೀಗಾಗಿ ನಾವು ಅವರ ಪ್ರದೇಶದೊಳಕ್ಕೆ ನುಗ್ಗಿ ದೊಡ್ಡ ಮಟ್ಟದ ದಾಳಿಯನ್ನೇ ನಡೆಸಿದ್ದೇವೆ ಎಂದು ಹೂಡಾ ಹೇಳಿದರು.
ನಿವೃತ್ತ ಸೇನಾಧಿಕಾರಿ ಹೂಡಾ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಆರ್ಮಿ ಚೀಫ್ ಜನರಲ್ ಬಿಪಿನ್ ರಾವತ್, ಇದೊಂದು ಅವರ ವೈಯಕ್ತಿಕ ಹೇಳಿಕೆ. ಅದರ ಬಗ್ಗೆ ನಾನೇನು ಹೇಳಲಾರೆ. ಆದರೆ ಸರ್ಜಿಕಲ್ ದಾಳಿ ಕಾರ್ಯಾಚರಣೆಯಲ್ಲಿ ಅವರು ಅಧಿಕಾರಿ ಭಾಗವಹಿಸಿದ್ದರು. ಹೀಗಾಗಿ ನಾನು ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದ್ದಾರೆ.