Advertisement

ಶಸ್ತ್ರಚಿಕಿತ್ಸೆ ಅನವಶ್ಯಕವಾಗಬಾರದು

09:50 AM Jul 22, 2019 | Team Udayavani |

ಧಾರವಾಡ: ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ ಹಲವು ಪ್ರಸಂಗಗಳಲ್ಲಿ ಮಹಿಳೆಯರಿಗೆ ವರದಾನವಾಗಿದೆ. ಆದರೆ ಹಲವು ಪ್ರಸಂಗಗಳಲ್ಲಿ ಶಸ್ತ್ರಚಿಕಿತ್ಸೆ ಅನಾವಶ್ಯಕವಾಗಬಾರದು ಎಂದು ಎಸ್‌ಡಿಎಂ ವೈದ್ಯ ಕಾಲೇಜಿನ ಹೆರಿಗೆ ಮತ್ತು ಸ್ತ್ರೀಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ| ರತ್ನಮಾಲಾ ದೇಸಾಯಿ ಹೇಳಿದರು.

Advertisement

ನಗರದ ಕವಿಸಂನಲ್ಲಿ ವಿಜ್ಞಾನ ಮಂಟಪದ ಆಶ್ರಯದಲ್ಲಿ ‘ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆ’ ವಿಷಯ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಪೈಕಿ ತರುಣಿಯರಿಗೆ ವ್ಯಾಪಾರೀಕರಣ ಉದ್ದೇಶದಿಂದ ಇಂತಹ ಶಸ್ತ್ರಚಿಕಿತ್ಸೆ ಮಾಡಿದರೆ ಅದು ವೈದ್ಯಕೀಯ ವೃತ್ತಿಗೆ ಬಗೆದ ಅನ್ಯಾಯ. ಗುಳಿಗೆ, ಇಂಜೆಕ್ಷನ್‌ ಮತ್ತಿತರ ವಿಧಾನಗಳ ಮೂಲಕ ರೋಗ ನಿಯಂತ್ರಿಸಲು ಬರುತ್ತದೆ. ಎಲ್ಲ ಹಾದಿಗಳು ಮುಗಿದು ಶಸ್ತ್ರಚಿಕಿತ್ಸೆಯೊಂದೇ ಜೀವ ಉಳಿಸುವ ಸಾಧನವಾಗಬೇಕು ಎಂಬ ಅರಿವು ವೈದ್ಯರಿಗೆ ಬೇಕು ಎಂದರು.

ವೈದ್ಯ ಡಾ| ಸಂಜೀವ ಕುಲಕರ್ಣಿ ಮಾತನಾಡಿ, ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಪೂರ್ವದ ಮತ್ತು ನಂತರದ ವಿಷಯ ಕುರಿತಾಗಿ ರೋಗಿಯ ಸಂಪೂರ್ಣ ವಿವರ ತಿಳಿಸುವ ಟಿಪ್ಪಣಿ, ಅಭಿಪ್ರಾಯ ಲಭ್ಯವಾಗುತ್ತವೆ. ಇವೆಲ್ಲ ವಿವರಗಳನ್ನು ಕಡ್ಡಾಯವಾಗಿ ಅಲ್ಲಿನ ವೈದ್ಯರು ಸರಕಾರಕ್ಕೆ ಸಲ್ಲಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಅಂತಹ ವ್ಯವಸ್ಥೆಯೇ ಇಲ್ಲ. ಗರ್ಭಾಶಯ ಶಸ್ತ್ರಚಿಕಿತ್ಸೆ ಯಾಕೆ ಮಾಡುತ್ತಾರೆಂಬ ಕಲ್ಪನೆ ರೋಗಿಗಳಿಗೆ ಇರಲ್ಲ, ಇಲ್ಲವೆ ವೈದ್ಯರು ಅದನ್ನು ಮನದಟ್ಟು ಮಾಡಿಕೊಡಲ್ಲ. ಜತೆಗೆ ಭೀಕರ ಕಾಯಿಲೆಗಳ ಹೆಸರು ಹೇಳಿ ಗರ್ಭಾಶಯ ಶಸ್ತ್ರಚಿಕಿತ್ಸೆಗೆ ರೋಗಿಗಳನ್ನು ಪುಸಲಾಯಿಸಲಾಗುತ್ತದೆ ಎಂದರು.

ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣ ಮತ್ತು ಸರಕಾರ ಮೇಲ್ವಿಚಾರಣೆಯ ಲೋಪದ ಕಾರಣದಿಂದ ಅನವಶ್ಯಕವಾಗಿ ಅದರಲ್ಲಿ ತರುಣಿಯರಿಗೆ ಗರ್ಭಾಶಯ ತೆಗೆಯುವ ಶಸ್ತ್ರಚಿಕಿತ್ಸೆಗಳು ಅಡೆತಡೆ ಇಲ್ಲದೇ ಸಾಗಿದ್ದು, ಈ ಬಗ್ಗೆ ಜನಜಾಗೃತಿ ಮತ್ತು ವೈದ್ಯರಲ್ಲಿ ಆತ್ಮ ವಿಮರ್ಶೆ ಅಗತ್ಯವಿದೆ ಎಂದು ಹೇಳಿದರು.

ಕೃಷ್ಣ ಜೋಶಿ ಸ್ವಾಗತಿಸಿದರು. ಮನೋಜ್‌ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು. ಶಿವಣ್ಣ ಬೆಲ್ಲದ ಇದ್ದರು. ಮಹಾಂತೇಶ ನರೇಗಲ್ಲ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next