Advertisement

ತಾ|ಕಚೇರಿಗೆ ಸರ್ಜರಿ:  ಸಂಜೀವ ಮಠಂದೂರು

09:41 AM Apr 27, 2022 | Team Udayavani |

ಪುತ್ತೂರು: ಕಂದಾಯ ಇಲಾಖೆಯಲ್ಲಿ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಜಾಗ ಮಂಜೂರಾತಿ ಸೇರಿದಂತೆ ಫಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಲು ಕೆಲಸ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಇದೆ. ಮುಂದಿನ ಒಂದು ತಿಂಗಳೊಳಗೆ ತಾಲೂಕು ಕಚೇರಿ ಕಾರ್ಯ ನಿರ್ವಹಣೆಯಲ್ಲಿ ಮೇಜರ್‌ ಸರ್ಜರಿ ಮಾಡಬೇಕು. ಇಲ್ಲದಿದ್ದರೆ ಅದಕ್ಕೆ ಬೇಕಾದ ಕ್ರಮ ನಾವೇ ಕೈಗೊಳ್ಳತ್ತೇವೆ ಎಂದು ಶಾಸಕ ಸಂಜೀವ ಮಠಂದೂರು ತಹಶೀಲ್ದಾರ್‌ಗೆ ಎಚ್ಚರಿಕೆ ನೀಡಿದ್ದಾರೆ.

Advertisement

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲಿಸಿದ ಬಳಿಕ ಅವರು ಮಾತನಾಡಿದರು. ಕೆಡಿಪಿ ಸದಸ್ಯ ಭಾಸ್ಕರ ರೈ ಕಂಟ್ರಮಜಲು, ಎಸ್‌.ಬಿ.ಜಯರಾಮ ರೈ, ಅಬ್ದುಲ್‌ ಕುಂಞಿ, ಶಂಭು ಭಟ್‌ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಪ್ರಸ್ತಾವಿಸಿದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ವಿರುದ್ಧ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮುಂಡೂರು ಗ್ರಾಮದ ಮುಸ್ಲಿಂ ದಫನ ಭೂಮಿಗೆ ಮಂಜೂರಾದ 2 ಎಕ್ರೆ ಜಮೀನಿನಲ್ಲಿ 50 ಸೆಂಟ್ಸ್‌ ಒತ್ತುವರಿ ಆಗಿರುವ ಬಗ್ಗೆ ಸ್ಥಳ ತನಿಖೆ ನಡೆಸುವಂತೆ ತಹಶೀಲ್ದಾರ್‌ ಅವರಿಗೆ ಹಿಂದಿನ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಅವರು ಈ ನಿರ್ಣಯ ಪಾಲನೆ ಮಾಡಿಲ್ಲ ಎಂದು ಕೆಡಿಪಿ ಸದಸ್ಯ ಶಂಭು ಭಟ್‌ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ತಹಶೀಲ್ದಾರ್‌, ಶಾಸಕರು, ಕೆಡಿಪಿ ಸದಸ್ಯರ ನಡುವೆ ಕೆಲವು ಹೊತ್ತು ಚರ್ಚೆ ನಡೆಯಿತು. ಕಳೆದ ಒಂದು ವರ್ಷದಿಂದ ಈ ಸಮಸ್ಯೆಯ ಬಗ್ಗೆ ಪ್ರಸ್ತಾವಿ ಸಿದ್ದರೂ ಕಂದಾಯ ಇಲಾಖೆ ಸ್ಪಂದನೆ ನೀಡಿಲ್ಲ ಎಂದು ಅಬ್ದುಲ್‌ ಕುಂಞಿ ದೂರಿದರು.

 800 ಮನೆಗಳ ಪೈಕಿ 574 ಆಯ್ಕೆ

ತಾಲೂಕಿಗೆ 800 ಮನೆಗಳು ಮಂಜೂ ರಾಗಿದ್ದು 574 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಕೆಲವೆಡೆ ಮೀಸಲಾತಿಗೆ ತಕ್ಕಂತೆ ಅರ್ಹ ಫಲಾನುಭವಿಗಳು ಸಿಕ್ಕಿಲ್ಲ. ಉಳಿಕೆ ಮನೆಗಳನ್ನು ಗ್ರಾ.ಪಂ. ಗಳಲ್ಲಿ ಫಲಾನುಭವಿಗಳು ಬಾಕಿ ಇದ್ದರೂ ಹೆಚ್ಚುವರಿ ಆಯ್ಕೆಗೆ ಅವಕಾಶ ನೀಡಿ ಭರ್ತಿ ಮಾಡಲಾಗುವುದು ಎಂದು ಇಒ ನವೀನ್‌ ಭಂಡಾರಿ ಹೇಳಿದರು.

Advertisement

ಕೆಎಂಎಫ್‌ ಪ್ರಾಡೆಕ್ಟ್ ಸ್ಟಾಲ್‌ ತೆರೆಯಿರಿ

ಕೆಎಂಎಫ್‌ನಲ್ಲಿ ಹಾಲಿನ ಉತ್ಪನ್ನ ಆಧಾರಿತ ಉತ್ಪನ್ನಗಳು ಗ್ರಾಹಕರಿಗೆ ದೊರೆಯುವ ನಿಟ್ಟಿನಲ್ಲಿ ಬಸ್‌ನಿಲ್ದಾಣದ ಬಳಿ ಕೆಎಂಎಫ್‌ ಉತ್ಪನ್ನಗಳ ಸ್ಟಾಲ್‌ ತೆರೆದರೆ ಉತ್ತಮ. ಇದಕ್ಕೆ ನಗರಸಭೆಯು ಸಹಕಾರ ನೀಡಲಿದೆ ಎಂದು ದ.ಕ.ಕೆಎಂಎಫ್‌ ಉಪಾಧ್ಯಕ್ಷ ಎಸ್‌.ಬಿ.ಜಯರಾಮ ರೈ ಅವರಿಗೆ ಶಾಸಕರು ಸಲಹೆ ನೀಡಿದರು.

ಈ ಬಾರಿ ಹದಿನೈದು ದಿನ ಮೊದಲೇ ಶಾಲೆ ಪುನಾರಂಭ

ಈ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳು ಮೇ 15 ರಿಂದ ಪ್ರಾರಂಭಗೊಳ್ಳಲಿದೆ. ಅಂದರೆ ಹದಿನೈದು ದಿನ ಮೊದಲೇ ಆರಂಭಗೊಳ್ಳಲಿದೆ. ಹೀಗಾಗಿ ಶಾಲಾ ಕಟ್ಟಡಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ವರದಿ ಸಿದ್ಧಗೊಳಿಸುವಂತೆ ಶಾಸಕರು ಶಿಕ್ಷಣಾಧಿಕಾರಿಗೆ ಸೂಚಿಸಿದರು. ಶಾಲಾ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ ಬಿಇಒ ಲೋಕೇಶ್‌ ತಾಲೂಕಿನಲ್ಲಿ 296 ಕೊಠಡಿಗಳಿಗೆ ಬೇಡಿಕೆ ಇದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಲಾ ಪ್ರಾರಂಭೋತ್ಸಕ್ಕೆ ಸ್ಥಳೀಯಾಡಳಿತದ ಸಹಕಾರದೊಂದಿಗೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು.

ಎಲ್‌ಕೆಜಿ, ಯುಕೆಜಿ ಪ್ರಾರಂಭಕ್ಕೆ ಬೇಡಿಕೆ

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರವೇಶಕ್ಕೆ ಅರ್ಜಿ ದುಪ್ಪಟ್ಟಾಗಿದೆ. ಆದರೆ ಈಗಿನ ನಿಯಮ ಪ್ರಕಾರ ಇಲಾಖೆಯಿಂದ ಶಿಕ್ಷಕರನ್ನು ಕೇಳುವಂತಿಲ್ಲ ಎಂದ ಬಿಇಒ ಸರಕಾರದಿಂದ ಒಪ್ಪಿಗೆ ದೊರೆತ ಬಳಿಕವಷ್ಟೇ ಪ್ರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದರು.

ಕೋವಿಡ್‌ ಮುನ್ನೆಚ್ಚೆರಿಕೆ ವಹಿಸುವಂತೆ ಸೂಚನೆ

ಕೋವಿಡ್‌ ನಾಲ್ಕನೇ ಅಲೆಯ ಲಕ್ಷಣ ಕಂಡು ಬಂದಿದ್ದು ಮುನ್ನೆಚ್ಚೆರಿಕೆ ಕ್ರಮವಾಗಿ ಮಾಸ್ಕ್ ಧರಿಸುವಿಕೆ ಕಡ್ಡಾಯಗೊಳಿಸಿ ಸರಕಾರ ಆದೇಶಿಸಿದೆ. ಇದರ ಪಾಲನೆಗೆ ಆರೋಗ್ಯ ಇಲಾಖೆ ಸಹಿತ ಸ್ಥಳೀಯಾಡಳಿತ ಗಮನ ಹರಿಸುವಂತೆ ಶಾಸಕರು ಸೂಚಿಸಿದರು. ಆರೋಗ್ಯ ಇಲಾಖೆ ಅಧಿಕಾರಿ ಉತ್ತರಿಸಿ, ತಾಲೂಕಿನಲ್ಲಿ ಈ ತನಕ ಕೊರೊನಾ ಸಕ್ರಿಯ ಪ್ರಕರಣ ಕಂಡು ಬಂದಿಲ್ಲ. ಕೋವಿಡ್‌ ಪರೀಕ್ಷೆ ನಡೆಯುತ್ತಿಲ್ಲ. ಈ ಹಿಂದೆ ತೆರೆಯಲಾಗಿದ್ದ ಕೋವಿಡ್‌ ಸೆಂಟರ್‌, ವಾರ್ಡ್‌ಗಳನ್ನು ಮುಚ್ಚಲಾಗಿದ್ದು ಅನಿವಾರ್ಯ ಸ್ಥಿತಿ ಉಂಟಾದರೆ ಪುನರ್‌ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾ.ಪಂ. ಆಡಳಿತಾಧಿಕಾರಿ ಕೆ.ಎಸ್. ಸಂಧ್ಯಾ, ಡಿವೈಎಸ್‌ಪಿ ಗಾನಾ ಪಿ.ಕುಮಾರ್, ನಗರಸಭೆ ಪೌರಾಯುಕ್ತ ಮಧು ಎಸ್‌. ಮನೋಹರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next