Advertisement

ಕುಮಾರೇಶ್ವರ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಶಸ್ತ್ರಚಿಕಿತ್ಸೆ

06:44 PM Jun 15, 2021 | Team Udayavani |

ಬಾಗಲಕೋಟೆ: ನಗರದ ಬಿವಿವಿ ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ತಜ್ಞ ವೈದ್ಯರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ರೋಗಿಗಳಲ್ಲಿ ಕಾಣಿಸಿಕೊಂಡಿದ್ದ ಬ್ಲ್ಯಾಕ್‌ ಫಂಗಸ್‌ಗೆ ಎಂಡೋಸ್ಕೊಪಿಯ ಅಂಗಾಂಶ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಮಾಡಲಾಯಿತು.

Advertisement

ಕೋವಿಡ್‌ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ನಂತರ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡ ಪರಿಣಾಮ 30ರಿಂದ 60ರ ವಯೋಮಾನದ ಈ ರೋಗಿಗಳು ಜಿಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮೂಗಿನಲ್ಲಿ ಕಾಣಿಸಿಕೊಳ್ಳುವ ಈ ಬ್ಲ್ಯಾಕ್‌ ಫಂಗಸ್‌ ನಿರ್ಲಕ್ಷಿಸಿದರೆ ಪ್ರಾಣಾಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೋಗದ ತೀವ್ರತೆಯನ್ನರಿತು ರೋಗಿಗಳ ಚಿಕಿತ್ಸೆಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಜಿಲಾ ಆರೋಗ್ಯ ಇಲಾಖೆ ಅ ಧಿಕಾರಿಗಳು ಕುಮಾರೇಶ್ವರ ಆಸ್ಪತ್ರೆಯ ನೆರವು ಕೇಳಿದರು.

ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಶಾಸಕರು ಮತ್ತು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ, ಬೆಲೆಬಾಳುವ ವೈದ್ಯಕೀಯ ಉಪಕರಣಗಳೊಂದಿಗೆ ಇ.ಎನ್‌. ಟಿ ವಿಭಾಗದ ತಜ್ಞ ವೈದ್ಯರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗಾಗಿ ನಿಯೋಜಿಸಿದರು.

ಕುಮಾರೇಶ್ವರ ಆಸ್ಪತ್ರೆಯ ಇ.ಎನ್‌ .ಟಿ ವಿಭಾಗದ ಮುಖ್ಯಸ್ಥ ಡಾ|ಎಸ್‌. ಎಸ್‌.ದೊಡ್ಡಮನಿ ನೇತೃತ್ವದಲ್ಲಿ ಡಾ|ಸಿ.ಎಸ್‌. ಹಿರೇಮಠ, ಡಾ|ಕವಿತಾ ಪಲ್ಲೇದ, ಡಾ| ಪ್ರಭು ಖವಾಸಿ, ಡಾ| ಮಲ್ಲಿಕಾರ್ಜುನ ಪಾಟೀಲ, ಡಾ|ಸಂತೋಷ ಮಾಳಶೆಟ್ಟಿ, ಡಾ| ಅರ್ಚನಾ ಮಾತ್ರಿ ಮತ್ತು ಡಾ|ಪವನ ಹೊಸಮನಿ ಈ ತಜ್ಞ ವೈದ್ಯರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್‌ ಫಂಗಸ್‌ನಿಂದ ನರಳುತ್ತಿದ್ದ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದರು. 9 ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು 11 ರೋಗಿಗಳಿಗೆ ಬಯಾಪ್ಸಿ ಸಹಿತ ಎಂಡೊಸ್ಕೊಪಿ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಕೆಲವು ರೋಗಿಗಳು ಗುಣಮುಖರಾಗಿ ಮನೆಗೆ ಮರಳಿರುವರು.

ಇನ್ನು ಕೆಲವು ರೋಗಿಗಳು ಚೇತರಿಸಿಕೊಂಡು ಚಿಕಿತ್ಸಾ ನಂತರದ ಅವಲೋಕನ ಹಾಗೂ ಔಷಧಿ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದಾರೆ. ಯಶಸ್ವಿ ಚಿಕಿತ್ಸೆಯನ್ನು ನೀಡಿ ರೋಗಿಗಳನ್ನು ಗುಣಪಡಿಸಿದ ಡಾ|ಎಸ್‌.ಎಸ್‌.ದೊಡ್ಡಮನಿ ಮತ್ತು ಅವರ ತಂಡದ ತಜ್ಞ ವೈದ್ಯರನ್ನು ಶಾಸಕ, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ|ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಮೆಡಿಕಲ್‌ ಕಾಲೇಜಿನ ಪ್ರಾಚಾರ್ಯ ಡಾ|ಅಶೋಕ ಮಲ್ಲಾಪುರ ಮತ್ತು ವೈದ್ಯಕೀಯ ಅಧಿಕ್ಷಕಿ ಡಾ|ಭುವನೇಶ್ವರಿ ಯಳಮಲಿ ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next