Advertisement

ಪಣಂಬೂರಿನಲ್ಲಿ ಮಾನ್ಸೂನ್‌ ಚಾಲೆಂಜ್‌

09:25 AM Apr 27, 2018 | Team Udayavani |

ಮಹಾನಗರ: ಮಂಗಳೂರಿನಲ್ಲಿ ಸರ್ಫಿಂಗ್‌ ಕ್ರೀಡೆಗೆ ಹೊಸ ಆಯಾಮ ತಂದುಕೊಟ್ಟಿರುವ ಸಸಿಹಿತ್ಲು ಕಡಲ ತೀರದಲ್ಲಿ ಈ ಬಾರಿ ಸರ್ಫಿಂಗ್‌ ಸದ್ದು ಮಾಡುತ್ತಿಲ್ಲ. ಆದರೆ ಪಣಂಬೂರು ಬೀಚ್‌ ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಪರ್ಧೆಯೊಂದಕ್ಕೆ ಸಿದ್ಧಗೊಳ್ಳುತ್ತಿದ್ದು, ಸರ್ಫಿಂಗ್‌ ಅಭಿಮಾನಿಗಳಿಗೆ ಸಂತಸ ತಂದಿದೆ.

Advertisement

ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ ಹಾಗೂ ಕೆನರಾ ಸರ್ಫಿಂಗ್‌ ಆ್ಯಂಡ್‌ ವಾಟರ್‌ ನ್ಪೋರ್ಟ್ಸ್ ಪ್ರಮೋಶನ್‌ ಕೌನ್ಸಿಲ್‌, ಮಂತ್ರ ಸರ್ಫ್‌ ಕ್ಲಬ್‌ ಆಶ್ರಯದಲ್ಲಿ ಪಣಂಬೂರು ಬೀಚ್‌ ಟೂರಿಸಂ ಡೆವಲಪ್‌ಮೆಂಟ್‌ ಪ್ರೊಜೆಕ್ಟ್ ಸಹಭಾಗಿತ್ವದಲ್ಲಿ ಜೂ. 2ರಿಂದ 7ರ ವರೆಗೆ ಆಹ್ವಾನಿತ ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಪರ್ಧೆ ‘ಮಾನ್ಸೂನ್‌ ಚಾಲೆಂಜ್‌’ ದೊಡ್ಡ ಮಟ್ಟದಲ್ಲಿ ಆಯೋಜನೆಗೊಳ್ಳಲಿದೆ. ಸ್ಪರ್ಧೆಯಲ್ಲಿ ದೇಶದ ವಿವಿಧ ಸರ್ಫಿಂಗ್‌
ಸ್ಕೂಲ್‌ ಹಾಗೂ ಕ್ಲಬ್‌ಗಳ ಸುಮಾರು 30 ಆಹ್ವಾನಿತ ಸರ್ಫಿಂಗ್‌ ಪರಿಣತ ತಂಡಗಳು ಭಾಗವಹಿಸಲಿವೆ. ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಪಣಂಬೂರಿನಲ್ಲಿ ಸಮುದ್ರದ ಅಲೆಗಳನ್ನು ಆಧರಿಸಿ ಸ್ಪರ್ಧೆಯ ವೇಳಾಪಟ್ಟಿ ರೂಪಿಸಲಾಗುತ್ತಿದೆ.

ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಪಟುಗಳು ಭಾಗಿ
ಪಣಂಬೂರು ಬೀಚ್‌ನ ದೊಡ್ಡ ಅಲೆ ಗಳು ಸರ್ಫಿಂಗ್‌ಗೆ ಪೂರಕವಾಗಿವೆ. ರಾಷ್ಟ್ರೀಯ ಮಟ್ಟದ ಖ್ಯಾತ ಸರ್ಫಿಂಗ್‌ 
ಪಟುಗಳು ‘ಮಾನ್ಸೂನ್‌ಸರ್ಫ್‌ ಚಾಲೆಂಜ್‌’ ಕೂಟದಲ್ಲಿ ಭಾಗವಹಿಸಲಿದ್ದಾರೆ. ಕಡಲ ಅಲೆಗಳ ಜತೆಗಿನ ಸೆಣಸಾಟದ ರೋಮಾಂಚಕ ಸಾಹಸ ಕ್ರೀಡೆ ಸರ್ಫಿಂಗ್‌ ಒಂದು ವಾರ ಕಾಲ ಮಂಗಳೂರಿನಲ್ಲಿ ಸರ್ಫಿಂಗ್‌ ಅಭಿಮಾನಿಗಳ ಕಣ್ಮನ ತಣಿಸಲಿದೆ. ಸ್ಪರ್ಧಿಗಳ ಒಟ್ಟು ಫಲಿತಾಂಶಗಳನ್ನು ಪರಿಗಣಿಸಿ ಮುಂದಿನ ಬಾರಿ ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಪಟುಗಳನ್ನು ಮಾನ್ಸೂನ್‌ ಸರ್ಫ್‌ ಚಾಲೆಂಜ್‌ ಸ್ಪರ್ಧೆಗೆ ಆಹ್ವಾನಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಸರ್ಫಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾದ ಅಧ್ಯಕ್ಷ ಕಿಶೋರ್‌ ತಿಳಿಸಿದ್ದಾರೆ.

ಸಸಿಹಿತ್ಲು ಸರ್ಫಿಂಗ್‌ ಉತ್ಸವಕ್ಕೆ ಸರಕಾರ 75 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ವಿಶ್ವ ಸರ್ಫ್‌ ಲೀಗ್‌ನ ಸ್ಟೀಫ‌ನ್‌ ರಾಬರ್ಟ್‌ಸ್‌ ಅವರು ಸಸಿಹಿತ್ಲು ಬೀಚ್‌ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದರು. ಮಂಗಳೂರು, ಉಡುಪಿ ಹಾಗೂ ಉತ್ತರಕನ್ನಡ ಮುಂತಾದೆಡೆಗಳ ಸರ್ಫಿಂಗ್‌ ಕ್ಲಬ್‌ ಸದಸ್ಯರು, ಗೋವಾ, ಪಾಂಡಿಚೇರಿ, ತಮಿಳುನಾಡಿನಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಫ್ರಾನ್ಸ್‌, ಮಾಲ್ಡೀವ್ಸ್‌, ಮಡಗಾಸ್ಕರ್‌ ಸೇರಿದಂತೆ ಅಂತಾರಾಷ್ಟ್ರೀಯಪಟುಗಳು ನೋಂದಾಯಿಸಿಕೊಂಡಿದ್ದರು.

ಸಸಿಹಿತ್ಲುವಿನಲ್ಲಿ ಈ ಬಾರಿ ಸರ್ಫಿಂಗ್‌ ಉತ್ಸವ ಇಲ್ಲ
ಎರಡು ವರ್ಷಗಳಲ್ಲಿ ಸರ್ಫಿಂಗ್‌ ಉತ್ಸವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಸಸಿಹಿತ್ಲುವಿನಲ್ಲಿ ಈ ಬಾರಿ ಸರ್ಫಿಂಗ್‌ ನಡೆಯುತ್ತಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಸರ್ಫಿಂಗ್‌ ಉತ್ಸವಕ್ಕೆ ಅನುದಾನ ನೀಡದಿರುವುದು ಹಾಗೂ ರಾಜ್ಯ ವಿಧಾನಸಭಾ ಚುನಾವಣೆ ಇದಕ್ಕೆ ಕಾರಣವಾಗಿದೆ.

Advertisement

ಸಿದ್ಧತೆ ನಡೆಯುತ್ತಿದೆ
ಪಣಂಬೂರು ಬೀಚ್‌ನಲ್ಲಿ ಜೂ. 2ರಿಂದ 7ರ ವರೆಗೆ ರಾಷ್ಟೀಯ ಮಟ್ಟದ ಆಹ್ವಾನಿತ ಮಾನ್ಸೂನ್‌ ಸರ್ಫ್‌ ಚಾಲೆಂಜ್‌ ಕೂಟ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ. ಇದರಲ್ಲಿ ಸುಮಾರು 25ರಿಂದ 30 ಪರಿಣತ ಸರ್ಫಿಂಗ್‌ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.
– ಯತೀಶ್‌ ಬೈಕಂಪಾಡಿ, ನಿರ್ದೇಶಕ, ಕೆನರಾ ಸರ್ಫಿಂಗ್‌ ಆ್ಯಂಡ್‌ ವಾಟರ್‌ ನ್ಪೋರ್ಟ್ಸ್ ಪ್ರಮೋಶನ್‌ ಕೌನ್ಸಿಲ್‌ 

– ರಾಷ್ಟ್ರೀಯ ಮಟ್ಟದ ಸರ್ಫಿಂಗ್‌ ಸ್ಪರ್ಧೆ
– ಜೂ. 2- 7ರ ವರೆಗೆ  ಸ್ಪರ್ಧೆ
– 30 ಆಹ್ವಾನಿತ ತಂಡಗಳು ಭಾಗಿ

— ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next