ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿಣ್ಣರ ಚಿಲಿಪಿಲಿ ಮೇಳೈಸಿತ್ತು.ಎಲ್ಲೆಲ್ಲೂ ಚಿನ್ನರ ಕಲರವ ಅನುರಣಿಸುತ್ತಿತ್ತು.ಮಕ್ಕಳ ದಿನಾಚರಣೆ ಹಿನ್ನಲೆಯಲ್ಲಿ ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಮಕ್ಕಳ ಕೂಟಗಳು ಚಿನ್ನರ ನಲಿದಾಟಕ್ಕೆ ಸಾಕ್ಷಿಯಾದವು.
ಮಕ್ಕಳ ದಿನಾಚರಣೆಯ ಅಂಗವಾಗಿಯೆ ಎಲ್‌ಎಸ್‌ಎಲ್ ಐಡಿಯಾ ಪ್ರೈವೇಟ್ ಲಿಮಿಟೆಡ್ ಇತರ ಸಂಸ್ಥೆಗಳ ಜೊತೆಗೂಡಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತರ ಶಾಲಾ ಸಾಂಸ್ಕೃತಿಕ ಚಿಣ್ಣರ ಮೇಳ “ಕಲರ್ಸ್ ಆಫ್ ಲೈಫ್-ಸಂಚಿನ-2017’ಕಾರ್ಯಕ್ರಮ ನೆರೆದವರನ್ನ ಆನಂದದ ಕಡಲಲ್ಲಿ ತೇಲುವಂತೆ ಮಾಡಿತು.
ಬೆಳಗ್ಗೆಯಿಂದ ಸಂಜೆಯವರೆಗೂ ನಡೆದ ಈ ಕಾರ್ಯಕ್ರಮದಲ್ಲಿ ನಗರದ 14 ಸರ್ಕಾರಿ ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಚಿನ್ನರ ನಾಡಿನ ಚಿನ್ನದ ಉತ್ಸವ ಶೀರ್ಷಿಕೆಯ ಅಡಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೆಗಡೆ ನಗರ, ಕಾಕ್ಸ್ ಟೌನ್ ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ನಮ್ ಮೇಷ್ಟ್ರು, ಮೆಹೆಂದಿ ಮತ್ತು ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರರಾದರು.
ಬೆಂಗಳೂರಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಳಿಗಾಗಿಯೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 5 ರಿಂದ 10 ನೇತರಗತಿಯ ವಿದ್ಯಾರ್ಥಿಗಳು ಸ್ಟೇಜ್ ಸಮಾರಂಭ ಸೇರಿದಂತೆ ಇನ್ನಿತರ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು.ಇದೇ ವೇಳೆ ಮಾತನಾಡಿದ ಪುಟಾಣಿಗಳು ಇಂತಹ ದೊಡ್ಡ ಸಭಾಂಗಣದಲ್ಲಿ ವೇದಿಕೆ ಕಲ್ಪಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಕಾರ್ಯಕ್ರಮದ ಆಯೋಜಕರಿಗೆ ಧನ್ಯವಾದ ಹೇಳಿದರು.
ಪುಟಾಣಿಗಳು ನಡೆಸಿಕೊಟ್ಟ ಮೊಬೈಲ್ ಬಳಕೆಯ ಅಪಾಯ ಹಾಗೂ ಪ್ರಾಣಕ್ಕೆ ಕುತ್ತು ಉಂಟುಮಾಡುವ ಬ್ಲೂವೆಲ್ ಗೇಮ್ ಸೇರಿದಂತೆ ಇನ್ನಿತರ ಜನಸಂದೇಶ ಸಾರುವ ಅರಿವಿನ ಕಾರ್ಯಕ್ರಮಗಳು ನೆರೆದಿದ್ದ ಸಭಿಕರ ಮೆಚ್ಚುಗೆಗೆ ಪಾತ್ರವಾದವು. ಕನ್ನಡಮ್ಮನ ಕುರಿತ ಸಂದೇಶ ಸಾರುವ ಸಾಮೂಹಿಕ ನೃತ್ಯಗಳಲ್ಲಿ ಪುಟಾಣಿಗಳು ಹೆಜ್ಜೆಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಇದೇ ವೇಳೆ ಮಾತನಾಡಿದ ಎಲ್‌ಎಸ್‌ಎಲ್ ಐಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಮಾತನಾಡಿದರು.
ಇನ್ನೂ ಫ್ರೆಜರ್ ಟೌನ್ ನ ಡ್ರೀಮ್ ವರ್ಲ್ಡ್ ಶಾಲೆ, ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವು ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಕ್ಕಳ ಚಿತ್ರಗಳ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ನೀಡವು ಸಂಬಂಧ ಲಯನ್ಸ್ ಸಂಸ್ಥೆ ಮುಂದಾಗಿದ್ದು ಇದರ ಅಂಗವಾಗಿ ಲಯನ್ಸ್ ಸಂಸ್ಥೆಯ ಜಿಲ್ಲೆ 317 ಎಫ್, ಪ್ರಸ್ ಕ್ಲಬ್ ನಲ್ಲಿ ಆಯೋಜಿಸದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಯಲಹಂಕ, ಗೌರಿಬಿದನೂರು,ಚಿಕ್ಕಬಳ್ಳಾಪುರ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.