ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ತಂಡದ ನಾಯಕ ಎಂ.ಎಸ್.ಧೋನಿಗೆ ಇಡೀ ತಮಿಳುನಾಡಿನಲ್ಲಿ ಅಭಿಮಾನಿ ಸಾಗರವೇ ಇದೆ. ಧೋನಿಯೆಂದರೆ ಅಲ್ಲಿ ಹುಚ್ಚು. ಅವರು ಚೆನ್ನೈ ತಂಡವನ್ನು ಮುನ್ನಡೆಸಿ, ಭಾರೀ ಯಶಸ್ಸು ತಂದುಕೊಟ್ಟಿರುವುದೇ ಕಾರಣ.
ಇದೀಗ ಧೋನಿ ಚೆನ್ನೈಗೆ ಆಗಮಿಸಿ ಅಭ್ಯಾಸ ಆರಂಭಿಸಿದ್ದಾರೆ. ಟ್ವೀಟರ್‌ನಲ್ಲಿ ಈ ಚಿತ್ರಗಳು ವಿಪರೀತ ಜನಪ್ರಿಯತೆ ಪಡೆದುಕೊಂಡಿವೆ. ಇದರ ಮಧ್ಯೆ ಬೇರೊಂದು ವಿಷಯ ಸದ್ದು ಮಾಡಿದೆ. ಅದೇನೆಂದು ತಿಳಿಯಬೇಕೆ?
ಸುರೇಶ್ ರೈನಾ, ಧೋನಿ ಸ್ನೇಹಿತರು. ಇಬ್ಬರೂ ಭಾರತ ತಂಡದಲ್ಲಿ, ಚೆನ್ನೈ ಪರವಾಗಿ ದೀರ್ಘಕಾಲ ಒಟ್ಟಾಗಿ ಆಡಿದವರು. ಈ ಹಿನ್ನೆಲೆಯಲ್ಲಿ ಧೋನಿ, ಚೆನ್ನೈಗೆ ಬಂದಾಗ ಈಗಾಗಲೇ ಅಲ್ಲಿರುವ ರೈನಾ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಅಷ್ಟು ಮಾತ್ರವಲ್ಲ ಧೋನಿ ಕುತ್ತಿಗೆಗೆ ಮುತ್ತಿಕ್ಕಿದ್ದಾರೆ! ಇದು ಈಗ ಚರ್ಚೆಯ ವಿಷಯ.
ಹಿಂದೊಮ್ಮೆ ಧೋನಿ ಭಾರತ ಟೆಸ್ಟ್ ತಂಡಕ್ಕೆ ದಿಢೀರ್ ರಾಜೀನಾಮೆ ನೀಡಿದಾಗ,
ಸುರೇಶ್ ರೈನಾ ಕಣ್ಣೀರು ಹಾಕಿದ್ದರು. ಧೋನಿಯ ಸಂಕಷ್ಟದ ಸಮಯಗಳಲ್ಲಿ ಬೆನ್ನಿಗೆ ನಿಂತಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.