ಬೆಂಗಳೂರು: ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆ ಬರೆಯಲು ತೆರಳುವಾಗ ಕೆಂಗೇರಿ ಬಳಿ ರಸ್ತೆ ಅಪಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಯನ್ನು ಭೇಟಿಯಾದ ಸಚಿವ ಎಸ್. ಸುರೇಶ್ ಕುಮಾರ್ ಆಕೆಯ ಆರೋಗ್ಯ ವಿಚಾರಿಸಿದರು.
ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಯಶಸ್ವಿನಿಗೆ ಕತ್ತಿನ ಬೆನ್ನುಮೂಳೆಯ ಎರಡು ವರ್ಟೆಬ್ರಿಯಾಗಳು ತೀವ್ರವಾಗಿ ಘಾಸಿಗೊಳಾಗಿದ್ದು ಎರಡು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ವಿದ್ಯಾರ್ಥಿನಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಆಸ್ಪತ್ರೆಯ ನಿರ್ದೇಶಕರಿಗೆ ಸಚಿವರು ಮನವಿ ಮಾಡಿದರು.
ಇದನ್ನೂ ಓದಿ:ಭಾರತೀಯ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಂಜೀವಿನಿ ಬಜೆಟ್: ಬಿ ಎಸ್ ಯಡಿಯೂರಪ್ಪ
ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕರೆಸಿದ ಸಚಿವರು, ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಕ್ಷಣವೇ ಒಂದು ಲಕ್ಷ ರೂ. ನೀಡಬೇಕೆಂದು ನಿರ್ದೇಶನ ನೀಡಿದರು. ಆಸ್ಪತ್ರೆಯಿಂದಲೇ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು, ಸದರಿ ವಿದ್ಯಾರ್ಥಿನಿಯ ತಂದೆ ಸೆಕ್ಯೂರಿಟಿ ನೌಕರಿ ಮಾಡುತ್ತಿದ್ದು, ತೀವ್ರ ಬಡತನದಲ್ಲಿರುವುದರಿಂದ ಇಲಾಖೆ ವತಿಯಿಂದಲೂ ಸಾಧ್ಯವಾದಷ್ಟು ನೆರವು ನೀಡಬೇಕೆಂದು ಕೋರಿದರು
ಬಾಲಕಿಯನ್ನು ಮಾತನಾಡಿಸಿದ ಸುರೇಶ್ ಕುಮಾರ್, ಧೈರ್ಯವಾಗಿರು ಚಿಕಿತ್ಸೆ ಯಶಸ್ವಿಯಾಗಿ ನೀನು ಮೊದಲಿನಂತಾಗುತ್ತೀಯಾ, ನಿನ್ನ ಹೆಸರೇ ‘ಯಶಸ್ವಿನಿ’, ಚಿಕಿತ್ಸೆಯಲ್ಲಿ ಯಶಸ್ಸು ನಿನ್ನದಾಗುತ್ತದೆ. ಯಾವುದಕ್ಕೂ ಹೆದರ ಬೇಡ ಎಂದು ಧೈರ್ಯ ತುಂಬಿದರು.
ಇದನ್ನೂ ಓದಿ: “ಆತ್ಮ ಬರ್ಬಾದ್” ಬಜೆಟ್ ಘೋಷಿಸಿದ್ದಾರೆ ನಿರ್ಮಲಾ : ಸಿದ್ದರಾಮಯ್ಯ
ಬಾಲಕಿಯ ತಂದೆ ತಾಯಿಯೊಂದಿಗೂ ಮಾತನಾಡಿದ ಸಚಿವರು, ತಮ್ಮ ಮಗಳು ಚೇತರಿಸಿಕೊಂಡು ಮೊದಲಿನಂತಾಗುತ್ತಾಳೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಚಿವರು ಹೇಳಿದರು.