ಬೆಳಗಾವಿ: ‘ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸುರೇಶ ಅಂಗಡಿ ಅವರ ಹೆಸರು ಕಳೆದ ನಾಲ್ಕು ತಿಂಗಳಿಂದ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿ ಇತ್ತು’ ಎಂದು ಸುರೇಶ್ ಅಂಗಡಿ ಅವರ ಮಾವ ಲಿಂಗರಾಜ್ ಪಾಟೀಲ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು.
ಸದಾಶಿವ ನಗರ ಸಮೀಪದ ಸಂಪಿಗೆ ರಸ್ತೆಯಲ್ಲಿರುವ ಸುರೇಶ್ ಅಂಗಡಿ ಅವರ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ಮುಂದಿನ ಮುಖ್ಯಮಂತ್ರಿ ಸುರೇಶ್ ಅಂಗಡಿಯವರನ್ನೇ ಮಾಡಬೇಕೆಂಬ ಚರ್ಚೆ ಬಲವಾಗಿ ಕೇಳಿ ಬರುತ್ತಿತ್ತು. ಈ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಗಳು, ಸಭೆಗಳು ನಡೆದಿವೆ. ಯಡಿಯೂರಪ್ಪ ನಂತರ ಲಿಂಗಾಯತ ಪ್ರಬಲ ನಾಯಕ ಅಂಗಡಿ ಆಗಿದ್ದರು. ಜೊತೆಗೆ ಶುದ್ಧ ಪ್ರಾಮಾಣಿಕ ಹಸ್ತದ ಅಂಗಡಿಯವರನ್ನು ಮುಖ್ಯಮಂತ್ರಿ ಮಾಡಿದರೆ ಒಳಿತು ಎಂಬ ಮಾತುಗಳು ಚರ್ಚೆಯಲ್ಲಿ ಇದ್ದವು. ಆದರೆ ವಿಧಿ ಕೈ ಹಿಡಿಯಲಿಲ್ಲ’ ಎಂದರು.
‘ಮುಂದಿನ ಲೋಕಸಭಾ ಉಪಚುನಾವಣೆಗೆ ಅಂಗಡಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು. ಟಿಕೆಟ್ ನೀಡುವ ವಿಚಾರದಲ್ಲಿ ಪಕ್ಷ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಅಂಗಡಿ ಅವರ ಪತ್ನಿ ಮಂಗಳಾ, ಪುತ್ರಿಯರಾದ ಸ್ಪೂರ್ತಿ ಹಾಗೂ ಶ್ರದ್ಧಾ ಅವರಿಗಾಗಲೀ ಅಥವಾ ಸುರೇಶರ ಸಹೋದರರಿಗಾಗಲೀ ಟಿಕೆಟ್ ನೀಡಬೇಕು. ಈ ಕುರಿತು ಕಟೀಲ್ ಅವರ ಗಮನಕ್ಕೂ ತರಲಾಗಿದೆ’ ಎಂದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
‘ಕುಟುಂಬದವರಿಗೆ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ರಾಜ್ಯಸಭಾ ಸದಸ್ಯ ಕಡಾಡಿ, ಜಿಲ್ಲೆಯ ಅನೇಕ ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು, ಜಿಲ್ಲಾಮಟ್ಟದ ಮುಖಂಡರು ಒಲವು ತೋರಿದ್ದಾರೆ. ವಿಷಯ ಬಂದಾಗ ಜಿಲ್ಲಾ ಉಸ್ತುವಾರಿ ಸಚುವ ರಮೇಶ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಯಲಿದೆ’ ಎಂದರು.