Advertisement

ಸುರೇಶ್ ಅಂಗಡಿ ಉತ್ತರಾಧಿಕಾರಿಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚರ್ಚೆ ಶುರು

05:14 PM Sep 25, 2020 | sudhir |

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಗಟ್ಟಿ ಸಾಮ್ರಾಜ್ಯ ಕಟ್ಟಿಕೊಂಡಿದ್ದ ಸುರೇಶ ಅಂಗಡಿ ಅವರ ಸ್ಥಾನ ತುಂಬುವವರು ಯಾರು? ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ. ಅಂಗಡಿ ಅವರ ಅನಿರೀಕ್ಷಿತ ಅಗಲಿಕೆ ನಾನಾ ರೀತಿಯ ಲೆಕ್ಕಾಚಾರಗಳಿಗೆ ಎಡೆಮಾಡಿ ಕೊಟ್ಟಿದೆ. ಉಪ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದ್ದರೂ ರಾಜಕೀಯ ಆಲೋಚನೆಗಳು ಗರಿಗೆದರಿವೆ.

Advertisement

ರಾಜಕೀಯ ರಂಗ ಪ್ರವೇಶ ಮಾಡಿದಾಗಿನಿಂದ ಒಮ್ಮೆಯೂ ಹಿನ್ನಡೆ ಕಾಣದ ಅಂಗಡಿ ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಪಕ್ಷ-ಕ್ಷೇತ್ರದಲ್ಲೂ ಗಟ್ಟಿ ಹಿಡಿತ ಹೊಂದಿದ್ದರು. ಚುನಾವಣೆ ಸಮಯದಲ್ಲಿ ಟಿಕೆಟ್‌ಗಾಗಿ ಕೆಲವರು ಸ್ಪರ್ಧೆಯೊಡ್ಡಿದರೂ ಅದರಿಂದ ಅಂಗಡಿ ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಆತಂಕವೂ ಬರಲಿಲ್ಲ.

ತಮ್ಮ ಬೆನ್ನಿಗೆ ಅದೃಷ್ಟದ ಗಂಟು ಕಟ್ಟಿಕೊಂಡೇ ರಾಜಕೀಯಕ್ಕೆ ಬಂದ ಅಂಗಡಿ ಕಳೆದ ನಾಲ್ಕು ಚುನಾವಣೆಗಳಲ್ಲೂ ಗೆಲುವಿನ ನಗೆ ಬೀರಿದ್ದರು. ಹೀಗಾಗಿ ಅವರಿಗೆ ಪರ್ಯಾಯ ನಾಯಕರು ಬೆಳೆಯಲು ಬಿಜೆಪಿಯಲ್ಲಿ ಅವಕಾಶ ಸಿಗದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ :ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಬಿಜೆಪಿಗೆ ಭಯ: ಆದರೀಗ ಅಂಗಡಿ ಅಗಲಿಕೆಯಿಂದ ಬಿಜೆಪಿ ಪಾಳೆಯದಲ್ಲಿ ಒಂದು ರೀತಿಯ ಅನಾಥ ಪ್ರಜ್ಞೆ ಕಾಡುತ್ತಿದೆ. ಜತೆಗೆ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯೂ ಎದು ರಾಗಿದೆ. ಕಾರಣ ಕ್ಷೇತ್ರದಲ್ಲಿ ಅಂಗಡಿಗೆ ಸೂಕ್ತವಾದ ಪರ್ಯಾಯ ಅಭ್ಯರ್ಥಿ ಕಾಣುತ್ತಿಲ್ಲ. ಹೀಗಾಗಿ ಬಿಜೆಪಿ ಈ ಸ್ಥಾನ ಉಳಿಸಿಕೊಳ್ಳಬೇಕಾದರೆ ಮತ್ತೆ ಜಾರಕಿಹೊಳಿ ಸಹೋದರರ ಸಹಾಯದ ಮೊರೆ ಹೋಗುವುದು ಅನಿವಾರ್ಯವಾಗಲಿದೆ. ಒಂದೇ ಜಾರಕಿಹೊಳಿ ಕುಟುಂಬದಲ್ಲಿ ಬಾಲಚಂದ್ರ ಜಾರಕಿ ಹೊಳಿ ಕಣಕ್ಕಿಳಿಯಬೇಕು. ಇಲ್ಲದಿದ್ದರೆ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸುವ ವ್ಯಕ್ತಿ ಕಣಕ್ಕಿಳಿಯಬೇಕು.

Advertisement

ಜಾರಕಿಹೊಳಿ ಸಹೋದರರ ಹೊರತಾಗಿ ಈಗ ರಮೇಶ ಕತ್ತಿ, ಉಮೇಶ ಕತ್ತಿ, ಅಭಯ ಪಾಟೀಲ ಹಾಗೂ ಪ್ರಭಾಕರ ಕೋರೆ ಹೆಸರು ಕಾಣುತ್ತಿವೆ. ಸುರೇಶ ಅಂಗಡಿ ಕುಟುಂಬದಲ್ಲಿ ಯಾರೊಬ್ಬರೂ ರಾಜಕೀಯ ಹಿನ್ನಲೆ ಅಥವಾ ಅನುಭವ ಹೊಂದಿಲ್ಲ. ಹೀಗಾಗಿ ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಟಿಕೆಟ್‌ ಸಿಗುವುದು ಬಹಳ ಕಷ್ಟ. ಇದರ ಹೊರತಾಗಿ ಅಂಗಡಿ ಅವರ ಸಂಬಂಧಿ ಸುಭಾಷ ಗೂಳಶೆಟ್ಟಿ ಬಿಜೆಪಿಯಲ್ಲಿದ್ದು ಕಳೆದ ಬಾರಿ ಖಾನಾಪುರ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರು ಪ್ರಯತ್ನ ಮಾಡಿದರೆ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ :ಅರ್ಧಕ್ಕೆ ನಿಂತ ಆಶ್ರಯ ಯೋಜನೆ ಮನೆಗಳು ! ಫಲಾನುಭವಿಗಳು ಕಂಗಾಲು

ಇಲ್ಲಿ ಬಿಜೆಪಿ ವರಿಷ್ಠ ಮಂಡಳಿ ಪಕ್ಷದ ಮೂಲ ಕಾರ್ಯಕರ್ತರಿಗೆ ಅಥವಾ ಆರ್‌ ಎಸ್‌ಎಸ್‌ ಹಿನ್ನಲೆಯುಳ್ಳ ವ್ಯಕ್ತಿಗೆ ಮಣೆ ಹಾಕುತ್ತದೆಯೇ ಇಲ್ಲವೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚಿಸುವ ಹೆಸರಿಗೆ ಅವಕಾಶ ಕೊಡುತ್ತದೆಯೋ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿ ಕಾಣುತ್ತಿದೆ. ರಾಜ್ಯಸಭೆಗೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ವರಿಷ್ಠರು ಇಲ್ಲಿಯೂ ಅದೇ ಮಾದರಿ ಅನುಸರಿಸಬಹುದು ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯ. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಸುರೇಶ ಅಂಗಡಿ ಅವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದಾಗ ಅಭಯ ಪಾಟೀಲ ಹೆಸರು ಕೇಳಿ ಬಂದಿತ್ತು. ಆದರೆ ಲೋಕಸಭೆಗೆ ಹೋಗಲು ಆಸಕ್ತಿ ತೋರಿಸದ ಅವರು ಈ ಅವಕಾಶವನ್ನು ನಿರಾಕರಿಸಿದ್ದರು. ಆಗ ಬೇರೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅದೃಷ್ಟ ಮತ್ತೆ ಸುರೇಶ ಅಂಗಡಿ ಬೆನ್ನೇರಿಗಿತ್ತು.

ಕಾಂಗ್ರೆಸ್‌ಗೆ ಅವಕಾಶ: ಇನ್ನು ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಯ ಕೊರತೆ ಇರುವುದನ್ನು ಗಮನಿಸಿರುವ ಕಾಂಗ್ರೆಸ್‌ ಈ ಅವಕಾಶದ ಲಾಭ ಪಡೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಲೆಕ್ಕಾಚಾರ ಹಾಗೂ ಆಲೋಚನೆಗಳು ಸಹ ಆರಂಭವಾಗಿವೆ. ಮುಂದಿನ ತಿಂಗಳಿಂದ ಇದಕ್ಕೆ ಒಂದು ಸ್ಪಷ್ಟ ರೂಪ ಬರಬಹುದು ಎಂಬುದು ಪಕ್ಷದ ಮೂಲಗಳ ಹೇಳಿಕೆ.

ಇದನ್ನೂ ಓದಿ :‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಟಾಳಕರ ಹಾಗೂ ಅಶೋಕ ಪಟ್ಟಣ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿದ್ದವು. ಈಗ ಸತೀಶ ಹಾಗೂ ಹೆಬ್ಟಾಳಕರ ಅವರ ನಿರ್ಧಾರದ ಮೇಲೆ ಕಾಂಗ್ರೆಸ್‌ನ ಉಳಿದ ಆಕಾಂಕ್ಷಿಗಳ ಭವಿಷ್ಯ ಅವಲಂಬಿತವಾಗಿದೆ. ಅವಕಾಶಗಳು ಮುಕ್ತವಾಗಿರುವುದರಿಂದ ಪೈಪೋಟಿ ಸಹ ಹೆಚ್ಚಾಗಲಿದೆ. ಒಂದು ವೇಳೆ ಸತೀಶ ಜಾರಕಿಹೊಳಿ ಸ್ಪರ್ಧೆ ಮಾಡಲು ಒಪ್ಪಿದರೆ ಆಗ ಯಮಕನಮರಡಿಯಿಂದ ಲಖನ್‌ ಜಾರಕಿಹೊಳಿ ಸ್ಪರ್ಧೆ ಮಾಡುವ ಅವಕಾಶ ಹೆಚ್ಚು. ಅದೇ ರೀತಿ ಹೆಬ್ಟಾಳಕರ ಲೋಕಸಭೆಗೆ ಸ್ಪರ್ಧೆ ಮಾಡಿದರೆ ಬೆಳಗಾವಿ ಗ್ರಾಮೀಣದಿಂದ ಹೊಸ ಮುಖ ಕಣದಲ್ಲಿ ಕಾಣಬಹುದು.

ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಏನೇ ನಡೆಯಲಿ ಮುಂದಿನ ಎರಡು ತಿಂಗಳು ಬೆಳಗಾವಿ ಜಿಲ್ಲೆ ಮತ್ತೆ ರಾಜಕೀಯ ಚಟುವಟಿಕೆಗಳಿಂದ ಎಲ್ಲರ ಗಮನ ಸೆಳೆಯುವುದು ನಿಶ್ಚಿತ.

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next