ಟೆಕ್ಸಾಸ್: ಕಡು ಬಡತನದಿಂದಾಗಿ ಒಂದು ಹಂತದಲ್ಲಿ ವಿದ್ಯಾಭ್ಯಾಸ ಸ್ಥಗಿತ ಗೊಳಿಸಿದ್ದ ವ್ಯಕ್ತಿ ಈಗ ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿ ಕೋರ್ಟ್‌ನ ನ್ಯಾಯಾಧೀಶ! ಇಂಥ ಸಾಧನೆ ಮಾಡಿದ್ದು ಕೇರಳದ ಕಾಸರಗೋಡು ಮೂಲದ ಸುರೇಂದ್ರನ್ ಕೆ. ಪಟ್ಟೇಲ್. ಅವರು 10ನೇ ತರಗತಿಯಲ್ಲಿದ್ದಾಗ ಬಡತನದಿಂದ ವಿದ್ಯಾಭ್ಯಾಸ ಸ್ಥಗಿತಗೊಳಿಸಿದ್ದರು. ಬಳಿಕ ಒಂದು ವರ್ಷ ಬೀಡಿ ಕಟ್ಟುತ್ತ, ಕೂಲಿ ಕೆಲಸ ಮಾಡುತ್ತ ದಿನ ದೂಡಿದ್ದರು. ಅನಂತರ ಗೆಳೆಯರ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಿದ್ದರು.
ಈಗ ಟೆಕ್ಸಾಸ್ ಜಿಲ್ಲಾ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುರೇಂದ್ರನ್, ಅಮೆರಿಕಕ್ಕೆ ಆಗಮಿ ಸಿದ ಸಂದರ್ಭದಲ್ಲಿ ನನ್ನ ವಿರುದ್ಧ ಸುಳ್ಳು ಪ್ರಚಾರ ನಡೆಸಲಾಗಿತ್ತು. ಆದರೆ ನಾನು ಡೆಮಾಕ್ರಾಟಿಕ್ ಪಕ್ಷದ ಪರ ಪ್ರಚಾರ ನಡೆಸಿದ್ದು ನೆರವಿಗೆ ಬಂತು ಎಂದು ಹೇಳಿದ್ದಾರೆ.
ಸುರೇಂದ್ರನ್ ಅವರ ಕುಟುಂಬ ಕಡು ಬಡತನದಲ್ಲಿ ಇದ್ದ ಕಾರಣ ಅವರಿಗೆ ಹತ್ತನೇ ತರಗತಿಯ ವರೆಗೆ ಒಂದು ಹಂತದಲ್ಲಿ ಕಷ್ಟದಿಂದ ಶಿಕ್ಷಣ ಪಡೆಯಲು ಸಾಧ್ಯವಾಗಿತ್ತು. ಅನಂತರ ಒಂದು ವರ್ಷದ ಕಾಲ ಬೀಡಿ ಕಟ್ಟುವುದು, ಕೂಲಿ ಕೆಲಸದ ಮೂಲಕ ಜೀವನ ನಿರ್ವಹಣೆ ಮಾಡಿ, ಕುಟುಂಬದ ನಿರ್ವಹಣೆ ಮಾಡಿದ್ದರು.
ಆ ಬಳಿಕ ಅವರು ನೀಲೇಶ್ವರದ ಇ.ಕೆ. ನಾಯನಾರ್ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆ ಯಲು ಮುಂದಾದರು. ಕೆಲಸ ಹಾಗೂ ಶಿಕ್ಷಣದ ಅನಿ ವಾರ್ಯದಿಂದ ಅವರು ಭಾರೀ ಕಷ್ಟಗಳನ್ನು ಎದುರಿಸ ಬೇಕಾಯಿತು. ಅನಂತರ ಎಲ್‌ಎಲ್‌ಬಿ ಪದವಿಯನ್ನು 1995ರಲ್ಲಿ ಪಡೆದರು. 2007ರ ವರೆಗೆ ಕಾಸರಗೋಡಿನ ಹೊಸದುರ್ಗದಲ್ಲಿ ನ್ಯಾಯವಾದಿಯಾಗಿ ಜನಪ್ರಿಯತೆ ಪಡೆದುಕೊಂಡರು.
ಅದೇ ವರ್ಷ ಅವರ ಪತ್ನಿಗೆ ಅಮೆರಿಕದಲ್ಲಿ ಕೆಲಸ ಸಿಕ್ಕಿದ್ದರಿಂದ ಅವರು ಅಲ್ಲಿಗೆ ತೆರಳಬೇಕಾಯಿತು. ಅಲ್ಲಿ ಯೂನಿವರ್ಸಿಟಿ ಆಫ್ ಹ್ಯೂಸ್ಟನ್‌ನ ಲಾ ಸೆಂಟರ್‌ನಲ್ಲಿ ಎಲ್‌ಎಲ್‌ಎಂ ಪದವಿ ಪಡೆದು, ವಕೀಲಿ ವೃತ್ತಿ ಆರಂಭಿಸಿದರು. ಟೆಕ್ಸಾಸ್‌ನ ಕೋರ್ಟ್‌ನಲ್ಲಿ ಕೆಲಸಕ್ಕೆ ಸೇರಿ ಹಂತಹಂತವಾಗಿ ಮುಂದುವರಿದು ಈಗ ನ್ಯಾಯಮೂರ್ತಿ ಆಗಿದ್ದಾರೆ.