Advertisement

ಸುರೇಖಾ ಕೊಲೆ ಕೇಸ್‌: ಆರೋಪಿಗೆ ಜೀವಾವಧಿ

11:59 PM Nov 06, 2019 | Lakshmi GovindaRaju |

ಬೆಂಗಳೂರು: ಐಟಿ ಕಂಪನಿ ಉದ್ಯೋಗಿ ಪಾಯಲ್‌ ಸುರೇಖಾ ಕೊಲೆ ಪ್ರಕರಣದ ಆರೋಪಿ ಜೇಮ್ಸ್‌ ಕುಮಾರ್‌ ರಾಯ್‌ಗೆ ಜೀವಾವಧಿ ಶಿಕ್ಷೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿದೆ. 2010ರ ಡಿಸೆಂಬರ್‌ನಲ್ಲಿ ಜೆ.ಪಿ ನಗರದಲ್ಲಿ ನಡೆದಿದ್ದ ಸುರೇಖಾ ಕೊಲೆ ಪ್ರಕರಣವನ್ನು ಬೇಧಿಸಿದ್ದ ಜೆ.ಪಿ ನಗರ ಠಾಣೆಯ ಅಂದಿನ ಇನ್ಸ್‌ಪೆಕ್ಟರ್‌ ಎಸ್‌.ಕೆ ಉಮೇಶ್‌ ನೇತೃತ್ವದ ತಂಡ, ಆರೋಪಿ ಜೇಮ್ಸ್‌ ಕುಮಾರ್‌ ರಾಯ್‌ನನ್ನು ಬಂಧಿಸಿದ್ದರು.

Advertisement

ಪ್ರಕರಣ ಬಳಿಕ ಸಿಬಿಐಗೆ ವರ್ಗಾವಣೆಗೊಂಡಿತ್ತು. ಪ್ರಕರಣ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿ ಜೇಮ್ಸ್‌ ರಾಯ್‌ ಅಪರಾಧಿ ಎಂದು ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೆ, ಆರೋಪಿ ಜೇಮ್ಸ್‌ಗೆ ಜೀವಾವಧಿ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ಜೆ.ಪಿ ನಗರ ಪೊಲೀಸರ ತನಿಖೆ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ಸುರೇಖಾ ಪಾಯಲ್‌ ಕುಟುಂಬಸ್ಥರು ಸಿಬಿಐಗೆ ತನಿಖೆ ನೀಡುವಂತೆ ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಅಂತಿಮವಾಗಿ 2013ರಲ್ಲಿ ಸಿಬಿಐಗೆ ವರ್ಗಾವಣೆಗೊಂಡಿತ್ತು. ಹಲವು ಆಯಾಮಗಳಲ್ಲಿ ಸಿಬಿಐ ತನಿಖೆ ನಡೆಸಿದರೂ ಸುರೇಖಾ ಕೊಲೆಯಲ್ಲಿ ಜೇಮ್ಸ್‌ ಒಬ್ಬನೇ ಆರೋಪಿ ಎಂದು ಪೊಲೀಸರು ಮಾಡಿದ್ದ ತನಿಖೆಯನ್ನು ಪುರಸ್ಕರಿಸಿ 2015ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವೈಯಕ್ತಿಕ ದ್ವೇಷಕ್ಕೆ ಕೊಲೆ: ಒಡಿಶಾ ಮೂಲದ ಪಾಯಲ್‌ ಸುರೇಖಾ ಹಾಗೂ ಅವರ ಪತಿ ಅನಂತ ನಾರಾಯಣ ಮಿಶ್ರಾ ಬಬುನೇಶ್ವರದಲ್ಲಿ ನಡೆಸುತ್ತಿದ್ದ ಜಿಮ್‌ನಲ್ಲಿ ಆರೋಪಿ ಜೇಮ್ಸ್‌ ರಾಯ್‌ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಜೇಮ್ಸ್‌ ಜಿಮ್‌ಗೆ ಬರುವ ಯುವತಿಯರು ಹಾಗೂ ಮಹಿಳೆಯರ ಫೊಟೋ, ವಿಡಿಯೋ ಸೆರೆಹಿಡಿಯುತ್ತಿದ್ದ. ಈ ವಿಚಾರ ಗೊತ್ತಾಗಿ ಸುರೇಖಾ ಹಾಗೂ ಅವರ ಪತಿ ಆತನನ್ನು ಕೆಲಸದಿಂದ ವಜಾಗೊಳಿಸಿದ್ದರು.

ಇದೇ ವಿಚಾರಕ್ಕಾಗಿ ಆತನಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಸುರೇಖಾ ದಂಪತಿ ಮೇಲೆ ಜೇಮ್ಸ್‌ ಹಗೆ ಸಾಧಿಸುತ್ತಿದ್ದ. ನಂತರದ ದಿನಗಳಲ್ಲಿ ಸುರೇಖಾ ದಂಪತಿ ಬೆಂಗಳೂರಿಗೆ ಆಗಮಿಸಿ ಐಟಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿದ್ದರು. ಜೆ.ಪಿ ನಗರದ 6ನೇ ಹಂತದ ಆರ್‌ಬಿಐ ಲೇಔಟ್‌ನಲ್ಲಿ ನೆಲೆಸಿದ್ದರು. 2010ರ ಡಿ.17ರಂದು ಕಾರ್ಯನಿಮಿತ್ತ ಪತಿ ಅನಂತ ನಾರಾಯಣ ಹೈದ್ರಾಬಾದ್‌ಗೆ ತೆರಳಿದ್ದರು. ಅದೇ ದಿನ ನಗರಕ್ಕೆ ಆಗಮಿಸಿದ್ದ ಜೇಮ್ಸ್‌ ರಾಯ್‌ ಸುರೇಖಾ ವಾಸವಿದ್ದ ಮನೆಗೆ ತೆರಳಿ ಬಾಗಿಲು ಬಡಿದಿದ್ದ.

Advertisement

ಬಾಗಿಲು ತೆರೆದು ಆಕೆ ಕೊಠಡಿ ಕಡೆ ಹೋಗುತ್ತಿದ್ದಂತೆ ಮುಗಿಬಿದ್ದ ಜೇಮ್ಸ್‌ ಆಕೆಯ ಮೇಲೆ ಹಲ್ಲೆ ನಡೆಸಿ ಕತ್ತು ಕುಯ್ದು ಕೊಲೆ ಮಾಡಿ ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದ. ಸುರೇಖಾ ಕೊಲೆ ಪ್ರಕರಣದ ವಿಚಾರ ಬಯಲಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಜೆ.ಪಿ ನಗರ ಪೊಲೀಸರು, ಆರೋಪಿ ಜೇಮ್ಸ್‌ ರಾಯ್‌ನನ್ನು ಬಂಧಿಸಿ ತನಿಖೆ ಪೂರ್ಣಗೊಳಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದರು.

ಕೂದಲು ನೀಡಿತ್ತು ಸಾಕ್ಷಿ: ಪಾಯಲ್‌ ಸುರೇಖಾ ಕೊಲೆ ಕೇಸ್‌ನಲ್ಲಿ ಕೂದಲು ಪ್ರಮುಖ ಸಾಕ್ಷ್ಯವಾಗಿತ್ತು. ಆರೋಪಿ ಜೇಮ್ಸ್‌ ಸುರೇಖಾಳ ಮೇಲೆ ಹಲ್ಲೆ ನಡೆಸಿದಾಗ ಆತ ಧರಿಸಿದ್ದ ಜಾಕೆಟ್‌ ಬಟನ್‌ಲ್ಲಿ ಆಕೆಯ ತಲೆ ಕೂದಲು ಸಿಕ್ಕಿತ್ತು. ಜತೆಗೆ, ಆತನಿಂದ ತಪ್ಪಿಸಿಕೊಳ್ಳಲು ಸುರೇಖಾ ಪ್ರತಿರೋಧ ತೋರಿ ಜೇಮ್ಸ್‌ ತಲೆಕೂದಲು ಹಿಡಿದಿದ್ದ ಪರಿಣಾಮ ಅವನ ಕೂದಲು ಸ್ಥಳದಲ್ಲಿ ಬಿದ್ದಿತ್ತು. ಈ ಕೂದಲುಗಳನ್ನು ಡಿಎನ್‌ಐ ಪರೀಕ್ಷೆಗೆ ಒಳಪಡಿಸಿದಾಗ ಅವು ಜೇಮ್ಸ್‌ನದ್ದೇ ಎಂದು ಸಾಬೀತಾಯಿತು ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು ಹೇಳಿದರು.

ಹೊತ್ತಿಕೊಂಡ ವಿವಾದದ ಕಿಡಿ: ಮೃತ ಸುರೇಖಾ ಕುಟುಂಬಸ್ಥರು, ಸುರೇಖಾ ಕೊಲೆಯಲ್ಲಿ ಆಕೆಯ ಗಂಡ ಮಿಶ್ರಾ ಪಾತ್ರವಿರಬಹುದು ಎಂದು ಅನುಮಾನಿಸಿದ್ದರು. ಜತೆಗೆ ಸ್ಥಳೀಯ ಪೊಲೀಸರ ತನಿಖೆ ಸಮರ್ಪಕವಾಗಿ ನಡೆದಿಲ್ಲ. ಹೀಗಾಗಿ ಸಿಬಿಐ ತನಿಖೆ ವಹಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಪ್ರಕರಣವನ್ನು ಸಿಸಿಬಿಗೆ ವಹಿಸಿತ್ತು. ತನಿಖೆ ವಿಳಂಬ ಆಗುತ್ತಿದೆ ಎಂದು ಪುನಃ ಸುಪ್ರೀಂಕೋರ್ಟ್‌ ಮೊರೆ ಹೋದರು ಅಂತಿಮವಾಗಿ ಸುಪ್ರೀಂಕೋರ್ಟ್‌ 2013ರಲ್ಲಿ ಸಿಬಿಐಗೆ ತನಿಖೆಗೆ ಆದೇಶಿಸಿತ್ತು.

ಪ್ರಕರಣದ ಆರಂಭ ತನಿಖೆ ನಡೆಸಿದ್ದ ಜೆಪಿನಗರ ಪೊಲೀಸರ ತನಿಖಾ ವರದಿ, ಪೊಲೀಸರ ವಿಚಾರಣೆ ಸೇರಿ ಮತ್ತೂಮ್ಮೆ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು, ಅಂತಿಮವಾಗಿ ಸ್ಥಳೀಯ ಪೊಲೀಸರು ಜೇಮ್ಸ್‌ ರಾಯ್‌ ಒಬ್ಬನೇ ಆರೋಪಿ ಎಂದು ಆತನ ವಿರುದ್ಧ 2015ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನಿಷ್ಪಕ್ಷಪಾತ ತನಿಖೆ, ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಹಾಗಿದ್ದು, ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ. ನಮ್ಮ ತನಿಖೆಯಲ್ಲಿ ಆರೋಪಿ ಎಂದು ಪರಿಗಣಿಸಿದ್ದವನೇ ಅಪರಾಧಿ ಎಂದು ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಸತ್ಯ ಹಾಗೂ ಪ್ರಾಮಾಣಿಕತೆಯ ಜಯ ಎಂದು ಭಾವಿಸುತ್ತೇನೆ.
-ಎಸ್‌.ಕೆ ಉಮೇಶ್‌, ಡಿವೈಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next