ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್ ಪ್ಲಾಜಾವನ್ನು ಹೆಜಮಾಡಿ ಟೋಲ್ ಪ್ಲಾಜಾದೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 60 ಕಿ.ಮೀ ಅಂತರದಲ್ಲಿರುವ ಟೋಲ್ ಪ್ಲಾಜಾಗಳನ್ನು ವಿಲೀನಗೊಳಿಸಲು ಅವಕಾಶವಿದೆ. ಅದರಂತೆ, ಸುರತ್ಕಲ್ ಟೋಲ್ ಪ್ಲಾಜಾ ಸೇರಿದಂತೆ ರಾಜ್ಯದಲ್ಲಿ 60 ಕಿ.ಮೀ ಅಂತರದಲ್ಲಿ ಟೋಲ್ ಪ್ಲಾಜಾಗಳನ್ನು ವಿಲೀನಗೊಳಿಸುವ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಅದನ್ನು ಸಚಿವಾಲಯ ತಾತ್ವಿಕವಾಗಿ ಒಪ್ಪಿಕೊಂಡಿದೆ.
ಅದೇ ರೀತಿ ರಾಷ್ಟ್ರೀಯ ಹೆದ್ದಾರಿ-66ರ ಕಿ.ಮೀ 358.042 ರಲ್ಲಿರುವ ಸುರತ್ಕಲ್ ಟೋಲ್ ಪ್ಲಾಜಾವನ್ನು ಕಿ.ಮೀ 347.180 ರಲ್ಲಿರುವ ಹೆಜಮಾಡಿ ಟೋಲ್ ಪ್ಲಾಜಾದೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯನ್ನು ಪ್ರಾಧಿಕಾರದಿಂದ ಪರಿಶೀಲನೆ ನಡೆಸಲಾಗುತ್ತಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.
ಸುರತ್ಕಲ್ ಟೋಲ್ ಪ್ಲಾಜಾ ಅಧಿಕೃತವೂ ಅನಧಿಕೃತವೂ ಎಂದು ಹರೀಶ್ ಕುಮಾರ್ ಕೇಳಿದ್ದಕ್ಕೆ, ಸುರತ್ಕಲ್ ಟೋಲ್ ಪ್ಲಾಜಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಅಧಿಕೃತವಾಗಿ ಸ್ಥಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಗಣ್ಯ ವ್ಯಕ್ತಿಗಳಿಗೆ ಆಗುತ್ತಿರುವ ಕಿರುಕುಳ ತಡೆಯಲು ಹಾಗೂ ವಿಐಪಿ ಮತ್ತು ತುರ್ತು ವಾಹನಗಳಿಗೆ ಮೀಸಲಿರುವ ಪ್ರತ್ಯೇಕ ಪಥದಲ್ಲಿ ಸುಗಮವಾಗಿ ವಾಹನಗಳು ಸಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದರು.