Advertisement

ವಾಹನ ದಟ್ಟಣೆ: ಫುಟ್‌ಪಾತ್‌ ಇಲ್ಲ; ಸೇತುವೆ ದಾಟಲು ಸಂಕಷ್ಟ

06:05 PM Dec 29, 2021 | Team Udayavani |

ಸುರತ್ಕಲ್‌: ಸುರತ್ಕಲ್‌, ಕುಳಾಯಿ ಗುಡ್ಡೆಯಲ್ಲಿ ಕೊಂಕಣ ರೈಲ್ವೇ ಲೈನ್‌ ಹಾದು ಹೋಗಿರುವ ಮೇಲ್ಸೇತುವೆಗಳು ನಿರ್ಮಾಣದ ಸಂದರ್ಭ ಏಕಮುಖ ಸಂಚಾರ ವ್ಯವಸ್ಥೆಗೆ ಮಾತ್ರ ಯೋಜನೆ ರೂಪಿಸಿ ನಿರ್ಮಾಣವಾಗಿರುವುದರಿಂದ ಫ‌ುಟ್‌ಪಾತ್‌ ಇಲ್ಲದೆ ಸುತ್ತಮುತ್ತಲ ಜನತೆ ಸೇತುವೆ ದಾಟಲು ಜೀವವನ್ನೇ ಪಣಕ್ಕಿಡಬೇಕಾದ ದುಸ್ಥಿತಿಯಿದೆ.

Advertisement

ಕೃಷ್ಣಾಪುರ, ಕಾನಾ, ಬಾಳ ಕಟ್ಲ ಬಜಪೆ ಸಂಪರ್ಕಿಸುವ ಪ್ರಮುಖ ಮೇಲ್ಸೇತುವೆ ಇದಾಗಿದೆ. ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಬಿಎಎಸ್‌ಎಫ್‌, ಎಂಎಸ್‌ಇಝಡ್‌ ಸಹಿತ ಬೃಹತ್‌ ಕೈಗಾರಿಕೆ ವಲಯದ ಸಾವಿರಾರು ಟ್ರಕ್‌, ಟ್ಯಾಂಕರ್‌ಗಳು ಈ ಕಿರಿದಾದ ಸೇತುವೆಯ ಮೇಲೆ ದಾಟಿಹೋಗಬೇಕಾಗುತ್ತದೆ. ಸುರ ತ್ಕಲ್‌ನಲ್ಲಿ ಇರುವ ಶಾಲಾ ಕಾಲೇಜಿಗೆ ಸ್ಥಳೀಯ ನೂರಾರು ಮಕ್ಕಳು ನಡೆದುಕೊಂಡು ಹೋಗುತ್ತಾರೆ. ಅಗಲ ಕಿರಿದಾದ ರಸ್ತೆಯಲ್ಲಿ ಘನ ವಾಹನಗಳ ನಡವೆ ಸೇತುವೆ ದಾಟುವ ನಿತ್ಯದ ಪರಿಪಾಟಲು ಹತ್ತವರ ಎದೆ ನಡುಗಿಸುತ್ತದೆ. ಈವರೆಗೆ ಹಲವು ಪಾದಚಾರಿಗಳು ವಾಹನ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ತಿರುವಿನಲ್ಲೇ ರೋರೋ ಸೇವೆ ಇರು ವುದರಿಂದ ಮತ್ತಷ್ಟು ವಾಹನದ ದಟ್ಟಣೆ ಹೆಚ್ಚಿದ್ದು, ಫುಟ್‌ಪಾತ್‌ ನಿರ್ಮಾಣದ ಬೇಡಿಕೆ ಇದುವರೆಗೂ ಈಡೇರಿಲ್ಲ.

ಈಗಿರುವ ಸೇವೆಯ ಒಳಗೆಯೇ ಫುಟ್‌ ನಿರ್ಮಾಣ ಅಸಾಧ್ಯ. ಕಾರಣ ಸೇತುವೆ ಅಗಲ ಕಿರಿದಾಗಿದ್ದು, ವಾಹನ ಓಡಾಟಕ್ಕೆ ಅಡಚಣೆ ಯಾಗುವ ಸಾಧ್ಯತೆಯಿದೆ. ಸೇತುವೆಯ ಹೊರ ಭಾಗದಲ್ಲಿ ಕಡಂಬೋಡಿ ತಿರುವು ರಸ್ತೆವರೆಗೆ ಫುಟ್‌ ನಿರ್ಮಿಸಿದಲ್ಲಿ ಸಮಸ್ಯೆ ಬಗೆಯ ಹರಿಯ ಬಹುದಾಗಿದೆ. ಈಗಾಗಲೇ ಕೊಂಕಣ ರೈಲ್ವೇ ತನ್ನ ಎಲ್ಲ ಟ್ರ್ಯಾಕ್ ಗಳನ್ನು ವಿದ್ಯುದ್ದೀಕರಣ ಗೊಳಿಸಿದ್ದು, ಯಾವುದೇ ನಿರ್ಮಾಣಕ್ಕೆ ಕೊಂಕಣ ರೈಲ್ವೇ ಅನುಮತಿ ಕಡ್ಡಾಯವಾಗಿದೆ.

ಕೊಂಕಣ ರೈಲ್ವೇ ಜತೆ
ಸಮಾಲೋಚನೆಗೆ ಪಾಲಿಕೆ ಚಿಂತನೆ
ಶಾಲಾ ಮಕ್ಕಳ, ಪಾದಚಾರಿಗಳ ಓಡಾಟಕ್ಕೆ ಅಗತ್ಯವಿರುವ ಫುಟ್‌ಪಾತ್‌, ಇದೀಗ ಸೇತುವೆ ಇಕ್ಕೆಲಗಳಲ್ಲಿ ಚತುಃಷ್ಪಥ ರಸ್ತೆ ನಿರ್ಮಾಣ ಪ್ರಗತಿಯಲ್ಲಿರುವುದರಿಂದ ಸೇತುವೆ ವಿಸ್ತರಣೆ ಅಗತ್ಯವಿದೆ. ಸೇತುವೆಯ ಎರಡೂ ಕಡೆಗಳಲ್ಲಿ ರಸ್ತೆ ಎತ್ತರವಾಗಲಿರುವುದರಿಂದ ರೈಲ್ವೇ ಸೇತುವೆ ಮೇಲೆ ಮುಂದಿನ ದಿನಗಳಲ್ಲಿ ಮಳೆ ಬಂದಾಗ ಮೊಣಕಾಲೆತ್ತರಕ್ಕೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ.

ಮಂಗಳೂರು ಮಹಾನಗರ ಪಾಲಿಕೆ ಕೊಂಕಣ ರೈಲ್ವೇ ಆಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕಾರವಾರ ದಲ್ಲಿರುವ ಕೊಂಕಣ ರೈಲ್ವೇ ಹಿರಿಯ ಆಧಿಕಾರಿಗಳಿಗೆ ಪತ್ರ ಬರೆದು ಇಲಾಖೆಯಿಂದ ನಿರಕ್ಷೇಪಣ ಪತ್ರ ಪಡೆದು ಫುಟ್‌ಪಾತ್‌ ನಿರ್ಮಿಸುವ ಬಗ್ಗೆ ಹಾಗೂ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವ ಬಗ್ಗೆ ಪೂರಕ ಸ್ಪಂದನೆ ದೊರೆತಿದೆ.

Advertisement

ಅಂದಾಜು ಪಟ್ಟಿ ನೀಡಲಾಗಿತ್ತು
2016ರಲ್ಲಿ ಮಂಗಳೂರು ಮಹಾನಗರ ಪಾಲಿಕೆ 6 ಲಕ್ಷ ರೂ. ಪಾವತಿಸಿ ಹೊಸ ರೈಲ್ವೇ ಮೇಲ್ಸೇ ತುವೆಯ ನಿರ್ಮಾಣ ಹಾಗೂ ಫುಟ್‌ಪಾತ್‌ ಬಗ್ಗೆ ಸಮೀಕ್ಷೆ ನಡೆಸಿತ್ತು. ಅದರಂತೆ ರೈಲ್ವೇ ಇಲಾಖೆ ವತಿಯಿಂದ ನೂತನ ಸೇತುವೆಗೆ 13.10 ಕೋಟಿ ರೂ., ಪಾದಚಾರಿ ಸೇತುವೆ ನಿರ್ಮಾಣಕ್ಕೆ 4 ಕೋಟಿ ರೂ. ಅಂದಾಜು ಪಟ್ಟಿ ನೀಡಲಾಗಿತ್ತು. ಇದೀಗ ಪ್ರಸ್ತುತ ದರದಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

ಮಾತುಕತೆ ನಡೆಸಿ ಕ್ರಮ
ರೈಲ್ವೇ ಮೇಲ್ಸೇತುವೆ ಅಗಲ ಕಿರಿದಾಗಿದ್ದು, ಫುಟ್‌ಪಾತ್‌ ನಿರ್ಮಾಣಕ್ಕೆ ಜನರಿಂದ, ವಿವಿಧ ಸಂಘ – ಸಂಸ್ಥೆಗಳಿಂದ ಮನವಿ ಬಂದಿದೆ. ಈ ಬಗ್ಗೆ ರೈಲ್ವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು.
-ಪ್ರೇಮಾನಂದ ಶೆಟ್ಟಿ,
ಮೇಯರ್‌

ಪೂರ್ವಾನುಮತಿ ಅಗತ್ಯ
ರೈಲ್ವೇ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಾಮಗಾರಿಗೂ ಇಲಾಖೆಯ ಪೂರ್ವಾನುಮತಿ, ನಿರಾಕ್ಷೇಪಣ ಪತ್ರ ಪಡೆದುಕೊಳ್ಳಬೇಕು.
– ಸುಧಾ ಕೃಷ್ಣಮೂರ್ತಿ,
ಸಾರ್ವಜನಿಕ ಸಂಪರ್ಕಾಧಿಕಾರಿ,
ಕೊಂಕಣ ರೈಲ್ವೇ

-ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next