Advertisement

ಸುರತ್ಕಲ್‌-ಕೃಷ್ಣಾಪುರ ಪ್ರದೇಶ ಬಂದ್‌

06:40 AM Jan 04, 2018 | Harsha Rao |

ಸುರತ್ಕಲ್‌: ಬಿಜೆಪಿ-ಹಿಂದೂ ಸಂಘಟನೆಗಳ ಕಾರ್ಯಕರ್ತ ದೀಪಕ್‌ ರಾವ್‌ ಕೊಲೆಯ ಮಾಹಿತಿ ತಿಳಿಯುತ್ತಿದ್ದಂತೆ ಸುರತ್ಕಲ್‌, ಕೃಷ್ಣಾಪುರ, ಗಣೇಶಪುರ, ಕಾನ-ಬಾಳ ಪ್ರದೇಶದಲ್ಲಿ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪರಿಣಾಮ ಬಂದ್‌ನ ವಾತಾವರಣ ನಿರ್ಮಾಣವಾಗಿತ್ತು. 

Advertisement

ಹತ್ಯೆಗೆ ಸಂಬಂಧಪಟ್ಟಂತೆ ಕೆಲವೊಂದು ವರ್ತಕರು ಸಂತಾಪ ಸೂಚಿಸಿ ಬಂದ್‌ ಮಾಡಿದರೆ, ಇನ್ನು ಕೆಲವರು ಅಹಿತಕರ ಘಟನೆ ನಡೆಯುವ ಆತಂಕದಿಂದ ವರ್ತಕರು ಅಂಗಡಿಗಳನ್ನು ಮುಚ್ಚಿದ್ದರು. ಜತೆಗೆ ಈ ಭಾಗದಲ್ಲಿ ಘಟನೆ ಬಳಿಕ ವಾಹನ ಸಂಚಾರವೂ ವಿರಳವಾಗಿತ್ತು. ಸಂಜೆಯಾಗುತ್ತಿದ್ದಂತೆ ಕೃಷ್ಣಾಪುರ-ಮಂಗಳೂರು ನಡುವೆ ಸಂಚರಿಸುವ ಎಲ್ಲ ಸಿಟಿ ಬಸ್‌ಗಳು ಬಂದ್‌ ಆದವು. ಆದುದರಿಂದ ದೂರ ಹೋಗಿದ್ದವರು ಸುರತ್ಕಲ್‌ನಲ್ಲಿ ತಲುಪಿ ಪರದಾಡಿದರು. 

ಸುರತ್ಕಲ್‌ ಪ್ರದೇಶದಲ್ಲಿ ಕಿಡಿಗೇಡಿಗಳು ವಾಹನಗಳಿಗೆ ಕಲ್ಲು ತೂರಾಟವನ್ನೂ ನಡೆಸಿದರು. ಘಟನೆಯಿಂದ ಒಂದು ಬಸ್ಸಿನ ಮುಂಬದಿಯ ಗಾಜು ಪೂರ್ತಿ ಹುಡಿಯಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದರು. ಜತೆಗೆ ಈ ಭಾಗದಲ್ಲಿ ಮೀಸಲು ಪಡೆ ಪೊಲೀಸರು ಕೂಡ ಬೀಡುಬಿಟ್ಟಿದ್ದಾರೆ. 

ಭದ್ರತೆಯ ದೃಷ್ಟಿಯಿಂದ ಪೊಲೀಸರು ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದರು. ಜತೆಗೆ ಪೊಲೀಸ್‌ ವಾಹನಗಳು ಗಸ್ತು ತಿರುಗುತ್ತಿದ್ದವು. ರಾತ್ರಿಯಾಗುತ್ತಿದ್ದಂತೆ ಇಡೀ ಪರಿಸರ ಬಿಕೋ ಎನ್ನುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next