Advertisement

ಸುರತ್ಕಲ್‌ ಹೊಸ ಮಾರುಕಟ್ಟೆ  ವ್ಯಾಪಾರಸ್ಥರ ಸಂಘ

10:45 AM Oct 31, 2017 | Team Udayavani |

ಮಹಾನಗರ: ಸುರತ್ಕಲ್‌ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಮಾರುಕಟ್ಟೆಯಲ್ಲಿ ಹಳೆ ಮಾರುಕಟ್ಟೆಯ ಎಲ್ಲ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುವುದು ಮತ್ತು ನಿಗದಿತ ಅವಧಿಯಲ್ಲಿ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು
ಲಿಖಿತವಾಗಿ ಭರವಸೆ ನೀಡಬೇಕು. ಜತೆಗೆ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಸೂಕ್ತ ಮೂಲಸೌಲಭ್ಯ ಒದಗಿಸಿಕೊಡಬೇಕು. ನಮ್ಮ ಈ ಮೂರು ಪ್ರಧಾನ ಬೇಡಿಕೆಗಳು ಈಡೇರದೆ ನಾವು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಗೊಳ್ಳುವುದಿಲ್ಲ ಎಂದು ಸುರತ್ಕಲ್‌ ಹೊಸ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಸ್ಪಷ್ಟಪಡಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಉಮರ್‌ ಫಾರೂಕ್‌, ಸ್ಥಳಾಂತರಗೊಳಿಸುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳನ್ನು ಒಳಗೊಂಡ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ಯಾವುದೇ ಕಾರಣಕ್ಕೂ ಈಗಿರುವ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೇಳಿದರು.

ಈವರೆಗೆ ಸ್ಥಳೀಯ ಶಾಸಕರು ಮಾರುಕಟ್ಟೆ ಸ್ಥಳಾಂತರ ಹಾಗೂ ನೂತನ ಮಾರುಕಟ್ಟೆ ನಿರ್ಮಾಣದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಪಾಲಿಕೆ ಆಯುಕ್ತರು ಅಥವಾ ಆಡಳಿತದಿಂದ ತಮಗೆ ಯಾವುದೇ ನೋಟಿಸ್‌ ಅಥವಾ ಭರವಸೆ ಸಿಕ್ಕಿಲ್ಲ ಎಂದರು.

ಸುಸಜ್ಜಿತ ಮಾರುಕಟ್ಟೆ ಮಾಡುವುದಕ್ಕೆ ನಮ್ಮ ಆಕ್ಷೇಪವೇನೂ ಇಲ್ಲ. ಆದರೆ ಅಲ್ಲಿ ಮಾಲ್‌ ಮಾದರಿಯ ಮಾರುಕಟ್ಟೆಯ ಅಗತ್ಯವಿಲ್ಲ. ಪರ್ಯಾಯವಾಗಿ ನಿರ್ಮಾಣವಾಗಿರುವ ಮಾರುಕಟ್ಟೆಯನ್ನು ಹಳೆ ಆವರಣ ಗೋಡೆಗೆ ಕಟ್ಟಲಾಗಿದೆ. ಆದರೆ ಇಲ್ಲಿ ವ್ಯಾಪಾರಿಗಳು ಉಸಿರಾಡಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಇಬ್ಬರಿಗೆ ನಿಲ್ಲಲು ಈ ಮಳಿಗೆಗಳಲ್ಲಿ ಸಾಧ್ಯವಿಲ್ಲ ಎಂದವರು ತಿಳಿಸಿದರು.

ಹೊಸ ಮಾರುಕಟ್ಟೆ ನಿಗದಿತ ಸಮಯದಲ್ಲಿ ಆದೀತೇ?
ಗೋಮಾಳ ಭೂಮಿಯಲ್ಲಿ ಮಾರು ಕಟ್ಟೆಯನ್ನು ನಿರ್ಮಿಸಲಾಗಿದ್ದು, ಎರಡು ವರ್ಷಗಳ ಅವಧಿಯಲ್ಲಿ ಆ ಜಾಗವನ್ನು ಬಿಟ್ಟುಕೊಡಬೇಕಾಗಿದೆ. ಈಗಾಗಲೇ ಎಂಟು ತಿಂಗಳ ಅವಧಿ ಮುಗಿದಿದೆ. ಇನ್ನುಳಿದ ಅಲ್ಪ ಅವಧಿಯಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಸಾಧ್ಯವೇ ಎಂದವರು ಪ್ರಶ್ನಿಸಿದರು. 

Advertisement

ತಾತ್ಕಾಲಿಕ ಮಾರುಕಟ್ಟೆಗೆ ಮೀನು ಹೊತ್ತು ತರುವ ಹಾಗೂ ಐಸ್‌ ತರುವ ವಾಹನಗಳು ಅಂಗಡಿಗಳತ್ತ ಬರಲು ವ್ಯವಸ್ಥೆ
ಇಲ್ಲವಾದ್ದರಿಂದ 35 ಮಂದಿ ಮೀನುಗಾರ ಮಹಿಳೆಯರು ಸ್ಥಳಾಂತರಗೊಳ್ಳದಿರಲು ನಿರ್ಧರಿಸಿರುವುದಾಗಿ ತಿಳಿಸಿದರು. ಸಂಘದ ಪ್ರ.ಕಾರ್ಯದರ್ಶಿ ಸಂತೋಷ್‌ ಶೆಟ್ಟಿ , ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಇದಿನಬ್ಬ ಉಪಸ್ಥಿತರಿದ್ದರು.

5 ಬಾರಿ ಸಳಾಂತರ
ಮೀನು ಮಾರಾಟಗಾರ ಮಹಿಳೆಯರ ಪರವಾಗಿ ಮಾತನಾಡಿದ ಪ್ರೇಮಾ, ಐವತ್ತು ವರ್ಷಗಳಲ್ಲಿ 5 ಮಾರುಕಟ್ಟೆಗಳಿಗೆ ಸ್ಥಳಾಂತರವಾಗಿದ್ದೇವೆ. ಈಗ ಮತ್ತೆ ಸ್ಥಳಾಂತರ ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next