ಕುಂದಾಪುರ: ಕರಾವಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್‌ಗಳು ತೀರಾ ಸನಿಹದಲ್ಲಿದ್ದು, ಫಾಸ್ಟಾಗ್ ಮೂಲಕ ಸುಂಕ ವಸೂಲು ಮಾಡಿದರೆ ಹೊರೆಯಾಗಲಿದೆ. ಆದ್ದರಿಂದ ಸ್ವಲ್ಪ ದರ ಏರಿಸಿಯಾದರೂ ಸುರತ್ಕಲ್, ಹೆಜಮಾಡಿ ಟೋಲ್‌ಗಳನ್ನು ಒಗ್ಗೂಡಿಸಬೇಕು ಎಂದು ಮಾಜಿ ಸಂಸದ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಒತ್ತಾಯಿಸಿದ್ದಾರೆ.
ಅವರು ಗುರುವಾರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ, ಫ್ಲೈಓವರ್ ಕೆಲಸ ನಿಶ್ಚಿತ ಅವಧಿಯಲ್ಲಿ ಮುಗಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೇಂದ್ರದಿಂದ ರಾಜ್ಯಕ್ಕೆ 5 ವಸತಿ ಶಾಲೆಗಳು ಮಂಜೂರಾಗಿದ್ದು, ಒಂದನ್ನು ಉಡುಪಿ ಜಿಲ್ಲೆಗೆ ತರಲು ಯತ್ನಿಸುತ್ತಿದ್ದೇನೆ. ಇದರಲ್ಲಿ ಶೇ.70 ಎಸ್‌ಸಿ ಮತ್ತು ಉಳಿಕೆ ಸೀಟು ಇತರ ಹಿಂದುಳಿದ ವರ್ಗದವರಿಗೆ ಮೀಸಲು. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಜಿಲ್ಲಾಡಳಿತದಿಂದ 15 ಎಕರೆ ಜಾಗ ಬೇಕಾಗುತ್ತದೆ ಎಂದರು.
ಕಸ್ತೂರಿರಂಗನ್ ವರದಿಗೆ ರಾಜ್ಯ ಸರಕಾರ ಆಕ್ಷೇಪ ಸಲ್ಲಿಸಿದೆ. ಡೀಮ್ಡ್ ಫಾರೆಸ್ಟ್ ಎಂದು ಒಂದು ಸರ್ವೆ ನಂಬರ್‌ನಲ್ಲಿ ಭಾಗಶಃ ಇದ್ದರೂ ಇಡೀ ಸರ್ವೆ ನಂಬರ್‌ಗೆ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ಜತೆ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇನೆ ಎಂದರು.
ವೇ ಬ್ರಿಡ್ಜ್ ಮೂಲಕ ಮರಳು ನೀಡಿದರೆ ಸಮಸ್ಯೆಯಾಗದು, ನಿಖರ ಲೆಕ್ಕ ಸಿಗುತ್ತದೆ ಎಂದ ಅವರು, ಮೊದಲು ಸಾಂಪ್ರದಾಯಿಕ ಮರಳುಗಾರಿಕೆಯಷ್ಟೇ ಇತ್ತು. ಬ್ರಹ್ಮಾವರದ ಕುಕ್ಕುಡೆಯ ಗಲಾಟೆ ಬಳಿಕ ರಾಷ್ಟ್ರೀಯ ಹಸಿರುಪೀಠದವರೆಗೆ ವ್ಯಾಜ್ಯ ಹೋಗಿ ಮೂರು ಜಿಲ್ಲೆಗಳ ಮರಳುಗಾರಿಕೆಗೆ ಒಂದೇ ಕಾಯ್ದೆ ಬರುವಂತಾಯಿತು ಎಂದರು. ಬೈಂದೂರಿನ ವತ್ತಿನೆಣೆಯಲ್ಲಿ ಉಡಾನ್ ಯೋಜನೆಯ ವಿಮಾನ ನಿಲ್ದಾಣ ಸ್ಥಾಪನೆ ಉತ್ತಮ ವಿಚಾರ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ 200 ಕೋ.ರೂ. ಅಗತ್ಯವಿದ್ದು, ಯಾವ ಸರಕಾರ ಇಷ್ಟು ಅನುದಾನ ಕೊಡಲಿದೆ ಎಂದು ಹೇಳಿದರು.