ಸುರತ್ಕಲ್: ಪೊಲೀಸ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ 2ನೇ ಬ್ಲಾಕ್ ಶಂಶುದ್ದೀನ್ ಸರ್ಕಲ್ ಬಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ತರಗತಿ ಕೊಠಡಿಯೊಳಕ್ಕೆ ಪೇರೆಂಟ್ಸ್ ಮೀಟಿಂಗ್ ನಡೆಯುತ್ತಿದ್ದ ಸಂದರ್ಭ ಯುವಕನೋರ್ವ ಶಿಕ್ಷಕಿ ಮೇಲೆ ಹಲ್ಲೆಗೈದ ಘಟನೆ ಶುಕ್ರವಾರ ನಡೆದಿದ್ದು ತಕ್ಷಣವೇ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಠಾಣಾ ಎಸ್ಐ ಪುನೀತ್ ಗಾಂವ್ಕರ್ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದೆ.
ಘಟನೆಯ ಹಿನ್ನೆಲೆ:
ಕಾಟಿಪಳ್ಳ ಖಾಸಗಿ ಶಾಲೆಯ ಬಳಿ ನಿವಾಸಿ ಚಂದ್ರಕಲಾ ಗಾಯಗೊಂಡು ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿ ಮಹಮ್ಮದ್ ಹನೀಫ್ ಪ್ರಕರಣದ ಆರೋಪಿಯಾಗಿದ್ದಾನೆ.
ಚಂದ್ರಕಲಾ ಅವರು ಪರಿಚಯದ ನೆಲೆಯಲ್ಲಿ ಹನೀಫ್ ನ ಪತ್ನಿಗೆ ಸಾಲ ನೀಡಿದ್ದು ಅದನ್ನು ಹಿಂತಿರುಗಿಸಿರಲಿಲ್ಲ. ಹಣದ ಅವಶ್ಯಕತೆ ಇದ್ದುದರಿಂದ ಅದನ್ನು ಹಿಂತಿರುಗಿಸುವಂತೆ ಚಂದ್ರಕಲಾ ಕೇಳುತ್ತಿದ್ದರು. ಹನೀಫ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಎರಡು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ.
ಶುಕ್ರವಾರ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಇದ್ದು ಈ ವೇಳೆ ಚಂದ್ರಕಲಾ ಹಾಗೂ ಹನೀಫ್ ಪತ್ನಿಯ ಮಧ್ಯೆ ಜಗಳ ನಡೆದಿದ್ದು ಚಂದ್ರಕಲಾ ಮಾತಿನ ಭರದಲ್ಲಿ ಹನೀಫ್ ನ ಪುಟ್ಟ ಮಗುವಿನ ಬಗ್ಗೆ ಮಾತಾಡಿದರೆಂಬ ಕೋಪದಲ್ಲಿ ಏಕಾಏಕಿ ಶಾಲಾ ಕೊಠಡಿಯಲ್ಲೇ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಚಂದ್ರಕಲಾ ಅವರ ಕೈ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ವಿರುದ್ಧ ಮಹಿಳಾ ದೌರ್ಜನ್ಯ, ಹಲ್ಲೆ ಮತ್ತಿತರ ಸೆಕ್ಷನ್ ನಡಿಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ವಶಕ್ಕೆ ನೀಡಿದೆ.