Advertisement

Surathkal: ಈಡೇರದ ಸ್ಕೌಟ್ಸ್‌ – ಗೈಡ್ಸ್‌ ಭವನ ಬೇಡಿಕೆ

02:49 PM Oct 01, 2024 | Team Udayavani |

ಸುರತ್ಕಲ್‌: ವಿಶ್ವದ 216 ದೇಶಗಳಲ್ಲಿರುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಳವಳಿ ಮಂಗಳೂರು ಸಮೀಪದ ಸುರತ್ಕಲ್‌ನಲ್ಲಿಯೂ ಅಸ್ತಿತ್ವ ಪಡೆದಿದ್ದು, ಮುಂಚೂಣಿಯಲ್ಲಿ ನಿಲ್ಲುವಂತಹ ಕೆಲಸಗಳನ್ನು ಮಾಡುತ್ತಿದೆ. ಆದರೆ ನಿರಂತರವಾಗಿ ಸೇವಾ ಕಾರ್ಯಕ್ರಮ ನಡೆಸಲು ಬೇಕಾದ ಕಟ್ಟಡ ಮಾತ್ರ ಇಲ್ಲದಿರುವುದು ತುಸು ಬೇಸರಕ್ಕೆ ಕಾರಣವಾಗಿದೆ.

Advertisement

ಸುರತ್ಕಲ್‌ ಭಾಗದ ಶಾಲೆಗಳಲ್ಲಿ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಮಂಗಳೂರು ಜಿಲ್ಲಾ ಸಮಿತಿ ಕ್ರೀಯಾ ಶೀಲತೆಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಸೇವಾ ಪರ ಚಟುವಟಿಕೆ, ಪಥ ಸಂಚಲನ, ಜಾಗೃತಿ ಮೂಡಿಸುವ ಕಾರ್ಯಕ್ರಮ, ಟ್ರಾಫಿಕ್‌ ನಿಯಮ ಪಾಲನೆಗೆ ವಾಹನ ಸವಾರರಿಗೆ ಮಾಹಿತಿ ಹೀಗೆ ಹತ್ತು ಹಲವು ತರಬೇತಿ ಮಕ್ಕಳಿಗೆ ಎಳವೆಯಲ್ಲಿಯೇ ನೀಡುತ್ತಿದೆ. ಕನ್ನಡಪರ ಉತ್ತಮ ಕಾರ್ಯಕ್ರಮಗಳಿಗೂ ಸ್ಕೌಟ್ಸ್‌ – ಗೈಡ್ಸ್‌ ಆದ್ಯತೆ ವಹಿಸಿದೆ. ಇದರಲ್ಲಿ ನೋಂದಾಣಿ ಮಾಡಿದ ಸಾವಿರಾರು ಮಕ್ಕಳು, ಶಿಕ್ಷಕರು ಇದ್ದಾರೆ.

ಇದೀಗ ಈ ಸಮಿತಿಯನ್ನು ಇನ್ನಷ್ಟು ಬಲಿಷ್ಟವಾಗಿ ಕಟ್ಟಿ ಬೆಳೆಸುವ ಉದ್ದೇಶ ದಿಂದ ಸುರತ್ಕಲ್‌ನಲ್ಲಿ ಸ್ಕೌಟ್ಸ್‌ – ಗೈಡ್ಸ್‌ ಭವನ ಹಾಗೂ ಕನ್ನಡ ಭವನದ ಕೂಗು ಎದ್ದಿದೆ. ಮಕ್ಕಳಲ್ಲಿ ಸಕರಾತ್ಮಕ ಮನೋಭಾವ ಮೂಡಿಸುವುದು, ಪರಿಸರ ಜಾಗೃತಿ, ಮಾದಕ ವಸ್ತುಗಳ ವಿರುದ್ಧ ನಿರಂತರ ಅಭಿಯಾನ, ಮಾರ್ಗದರ್ಶನ ಮತ್ತಿತರ ಕ್ರಿಯಾಶೀಲ ಚಟುವಟಿಕೆ ಹಮ್ಮಿಕೊಳ್ಳಲು ಭವನದ ಅಗತ್ಯವಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸದ್ಬಳಕೆಯಾಗಲಿ
ಸುರತ್ಕಲ್‌ನಲ್ಲಿ ಈಗಾಗಲೇ ಸರಕಾರಿ ಅನುದಾನದಲ್ಲಿ ಕಟ್ಟಡ ನಿರ್ಮಿಸಿ ಪೂರ್ಣಗೊಂಡ ಹಲವು ಭವನಗಳಿವೆ. ಆದರೆ ಯಾವುದೂ ಚಟುವಟಿಕೆ ಯಿಲ್ಲದೆ ಕೇವಲ ಭದ್ರತಾ ಪಡೆಗಳಿಗೆ ತಂಗಲು ಮಾತ್ರ ಸದ್ಬಳಕೆಯಾಗುತ್ತಿದೆ. ಯು.ಎಸ್‌. ಮಲ್ಯ ಭವನ, ಅಂಬೇಡ್ಕರ್‌ ಭವನ, ಸಮೀಪದಲ್ಲೇ ತಾಲೂಕು ಪಂಚಾಯತ್‌ ಜಾಗದಲ್ಲಿ ಕಟ್ಟಡಗಳು ಹೀಗೆ ಹಲವು ಸ್ಥಳಗಳಿದ್ದರೂ ಉದ್ದೇಶಿತ ಗುರಿ ತಲುಪಲಾಗದೆ, ಕಟ್ಟಡ ನಿರ್ವಹಣೆ ಯಿಲ್ಲದೆ ಹಾಳಾಗುತ್ತಿದೆ. ಇದಕ್ಕಿಂತ ಮಕ್ಕಳ ಬುದ್ಧಿಮತ್ತೆಯ ಹಾಗೂ ದೈಹಿಕ ಚಟುವಟಿಕೆಗೆ ಸದ್ಬಳಕೆ ಯಾದರೆ ಸರಕಾರದ ಅನುದಾನವೂ ಸದ್ಬಳಕೆಯಾದಂತೆ ಎಂಬುದು ತಜ್ಞರ ಅಭಿಪ್ರಾಯ.

ಸರಕಾರದ ಪ್ರೋತ್ಸಾಹ ಅಗತ್ಯ
ಪರಿಸರ ಉಳಿಸುವಲ್ಲಿ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸ್ಕೌಟ್ಸ್‌ – ಗೈಡ್ಸ್‌ ಮಕ್ಕಳ, ಶಿಕ್ಷಕರ ಪಾತ್ರ ಬಹಳ ದೊಡ್ಡದು. ಸರಕಾರ ಇನ್ನಷ್ಟು ಸರಿಯಾದ ಪ್ರೋತ್ಸಾಹ ನೀಡಿದರೆ ಈ ಚಟುವಟಿಕೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಲು ಸಿದ್ಧರಿದ್ದೇವೆ. ಇದಕ್ಕಾಗಿ ಸೂಕ್ತ ಭವನವೊಂದನ್ನು ನೀಡಿದರೆ ಮತ್ತಷ್ಟು ಹುರುಪಿನಿಂದ ಚಟುವಟಿಕೆ ನಡೆಸುತ್ತೇವೆ.
-ಪಿ. ದಯಾಕರ್‌, ಸ್ಕೌಟ್ಸ್‌ -ಗೈಡ್ಸ್‌ ಸುರತ್ಕಲ್‌ ಸಮಿತಿ ಅಧ್ಯಕ್ಷರು

Advertisement

ಹಲವು ಬಾರಿ ಮನವಿ
ಸುರತ್ಕಲ್‌ ಭಾಗದಲ್ಲಿ ಸ್ಕೌಟ್ಸ್‌ ಗೈಡ್ಸ್‌ ಭವನಕ್ಕೆ ಬೇಡಿಕೆ ಮಂಡಿಸುತ್ತಲೇ ಬಂದಿದ್ದೇವೆ. ಇದೀಗ ಉಸ್ತುವಾರಿ ಸಚಿವ ಗುಂಡೂರಾವ್‌ ಅವರಿಗೆ ಮನವಿ ಸಲ್ಲಿಸಿದ್ದು ಸುರತ್ಕಲ್‌ನಲ್ಲಿರುವ ಒಂದೆರಡು ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಸೇವಾ ಚಟುವಟಿಕೆ, ಮಕ್ಕಳ ಶಿಕ್ಷಣಕ್ಕೆ ಇದರಿಂದ ಉಪಯೋವಾಗುತ್ತದೆ.
-ರೊನಾಲ್ಡ್‌ ಫೆರ್ನಾಂಡಿಸ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next