ಉಡುಪಿ: ಸುರತ್ಕಲ್‌ನಲ್ಲಿರುವ ಟೋಲ್‌ಗೇಟ್ ತೆರವುಗೊಳಿಸುವ ಸಂಬಂಧ ನಡೆಯುತ್ತಿರುವ ಹೋರಾಟವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯಲು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳು ಸೇರಿ ಅ.18ರ ಬೆಳಗ್ಗೆ 9.30ಕ್ಕೆ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಿಐಟಿಯು ಜಿಲ್ಲಾ ವಕ್ತಾರ ಬಾಲಕೃಷ್ಣ ಶೆಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್‌ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವರ್ಷಗಳನ್ನು ಆಕ್ರಮವಾಗಿ ಪೂರೈಸಿದೆ. ಈ ಅವಧಿಯಲ್ಲಿ ಸುರತ್ಕಲ್, ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಸುಂಕ ಸಂಗ್ರಹದ ಹೆಸರಿನಲ್ಲಿ ವಾಹನ ಸವಾರರಿಂದ ಸುಮಾರು 400 ಕೋ.ರೂ. ವಸೂಲಿ ಮಾಡಿದ್ದಾರೆ. ಹತ್ತು ಕಿ.ಮೀ. ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಹೆದ್ದಾರಿ ದರೋಡೆಗೆ ಸಮವಾಗಿದೆ. ಈ ರೀತಿ ಪ್ರಯಾಣಿಕರನ್ನು ಬಲವಂತವಾಗಿ ವಸೂಲಿ ಮಾಡುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದರು.
ಹೆಜಮಾಡಿಯ ನವಯುಗ ಟೋಲ್‌ಗೇಟ್ ಆರಂಭಗೊಂಡ ತತ್‌ಕ್ಷಣ ಸುರತ್ಕಲ್ ಟೋಲ್‌ಗೈಟ್ ಮುಚ್ಚುವುದಾಗಿ ಹೇಳಿದ್ದರು. ಅನೇಕ ಪ್ರತಿಭಟನೆ ನಡೆದರೂ ಟೋಲ್‌ಗೇಟ್ ಮುಚ್ಚಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಸಹಿತ ಯಾರು ಕೂಡ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಟೋಲ್ ತೆರವಿಗೆ ಆಗ್ರಹಿಸಿ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿದ್ದೇವೆ.
ಅ.18ರಂದು ತುಳುನಾಡಿನ ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಟೋಲ್‌ಗೆ ಮುತ್ತಿಗೆ ಹಾಕಲಿದ್ದೇವೆ. ದ.ಕ., ಉಡುಪಿ ಜಿಲ್ಲೆಗಳ ಸಾರಿಗೆ ಯೂನಿಯನ್‌ಗಳು, ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಲಾರಿ, ಟ್ರಕ್ ಮಾಲಕರ ಸಂಘಗಳು, ಕಾರ್ಮಿಕ, ದಲಿತ, ವಿದ್ಯಾರ್ಥಿ ಯುವಜತೆ ಮುತ್ತಿಗೆ ಭಾಗವಹಿಸಲಿದ್ದಾರೆ. ಇದಕ್ಕೆ ಪೂರಕವಾಗಿ ಅ.14ರಂದು ಉಡುಪಿ ನಗರದಲ್ಲಿ ಜಾಗೃತಿ ರ್‍ಯಾಲಿ ನಡೆಸಲಿದ್ದೇವೆ ಎಂದು ಹೇಳಿದರು.
ದಸಂಸ ಸಮಿತಿಯ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಕಾಶ್ ಅಡಿಗ, ಕೀರ್ತಿ ಶೆಟ್ಟಿ, ಸಂಜೀವ ಬಳ್ಕೂರು ಪತ್ರಿಕಾಗೋಷ್ಠಿಯಲ್ಲಿದ್ದರು.