ಸುರಪುರ: ತಾಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದಲಿತ ಸಮುದಾಯದ ಮುಖ್ಯ ಶಿಕ್ಷಕನ ಅಮಾನತು ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ತಾಲೂಕು ಘಟಕದ ಕಾರ್ಯಕರ್ತರು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಮಿತಿ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ ಮಾತನಾಡಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಮಲ್ಲಿಬಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳನ್ನು ಸೇವೆಯಿಂದ ಅಮಾನತು ಮಾಡಿರುವುದು ಖಂಡನೀಯ. ಕೆಲ ಜಾತಿವಾದಿ ಸಹಶಿಕ್ಷಕ ಪಿತೂರಿಯಿಂದ ಅಮಾನತು ಮಾಡಿರುವುದು ದಲಿತ ಸಮುದಾಯದ ಶಿಕ್ಷಕನಿಗೆ ಕಿರುಕುಳ ಕೊಡುವ ದುರುದ್ದೇಶವಾಗಿದೆ ಎಂದು ಆರೋಪಿಸಿದರು.
ಕಚೇರಿ ಕೆಲಸದೊಂದಿಗೆ ಮುಖ್ಯ ಶಿಕ್ಷಕ ವಿಜಯಕುಮಾರ ನಿತ್ಯವು ಶಾಲೆಗೆ ಹಾಜರಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯ ಲೋಪದ ಕುರಿತು ಯಾವುದೇ ಆರೋಪಗಳಿಲ್ಲ. ಬಿಇಒ ಅವರು ಈ ಕುರಿತು ತನಿಖೆ ಮಾಡದೆ ಏಕಾಏಕಿ ಅಮಾನತು ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.
ಅಮಾನತಿನ ಹಿಂದೆ ಸಾಕಷ್ಟು ಪಿತೂರಿ ಇದೆ. ಪ್ರಭಾರಿ ಬಿಇಒ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಸ್ವ-ಜಾತಿಯ ಶಿಕ್ಷಕರಿಗೆ ಅಧಿಕಾರ ಕೊಡಿಸುವ ಉದ್ದೇಶದಿಂದ ದಲಿತ ಶಿಕ್ಷಕರನ್ನು ಅಮಾನತು ಮಾಡುವ ಕೆಲಸ ಮಾಡುತ್ತಿದ್ದಾರೆ. ರತ್ತಾಳ, ಕರ್ನಾಳ, ಮಲ್ಲಿಬಾವಿ ಸೇರಿದಂತೆ ಇತರೆ ಗ್ರಾಮಗಳ ಕೆಳ ಜಾತಿಯ ಮುಖ್ಯ ಗುರುಗಳನ್ನು ಅಮಾನತು ಮಾಡಿ ಸ್ವ-ಜಾತಿಯವರಿಗೆ ಅಧಿಕಾರ ವಹಿಸಿಕೊಟ್ಟಿರುವುದು ಜಾತೀಯತೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕು. ಈ ಕುರಿತು ಪಿತೂರಿ ನಡೆಸಿರುವ ಶಾಲೆ ಜಾತಿವಾದಿ ಸಹ ಶಿಕ್ಷಕ ಮಲ್ಲಿಕಾರ್ಜುನ ವಿರುದ್ಧ ಶಿಸ್ತುಕ್ರಮ ಜರುಗಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮಿತಿ ಪ್ರಮುಖರಾದ ಮರಿಲಿಂಗಪ್ಪ ಹುಣಸಿಹೊಳೆ, ಜೆಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ, ಮಲ್ಲಿಕಾರ್ಜುನ ಆಶನಾಳ, ಬಸಲಿಂಗಪ್ಪ ಏವುರ, ಮಲ್ಲಿಕಾರ್ಜುನ ಮಳಳ್ಳಿ, ಚಂದ್ರಕಾಂತ ಹಂಪಿನ, ಬಸವರಾಜ ಗೋನಾಲ, ಭೀಮಣ್ಣ ಖ್ಯಾತನಾಳ, ಶರಣಪ್ಪ ಉಳ್ಳೆಸೂಗೂರ, ಗೌತಮ ಕ್ರಾಂತಿ, ಶೇಖಪ್ಪ ಬಂಡಾರಿ, ಮಹೇಶ ಸುಂಗಕರ್, ಪೀರಪ್ಪ ದೇವತ್ಕಲ್ ಇದ್ದರು.