Advertisement

ಪಶು ವೈದ್ಯರು-ಸಿಬಂದಿ ಕೊರತೆ

12:23 PM Sep 25, 2019 | Naveen |

„ಸಿದ್ದಯ್ಯ ಪಾಟೀಲ

Advertisement

ಸುರಪುರ: ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಲು ರೈತರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಪಶು ಇಲಾಖೆ ಸಮರ್ಪಕ ಸಿಬ್ಬಂದಿ ಕೊರತೆಯಿಂದ ಜಾನುವಾರುಗಳು ಸಂಕಷ್ಟ ಎದುರಿಸುತ್ತಿವೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೈತರು ಖಾಸಗಿ ವೈದ್ಯರ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ತಾಲೂಕು ಕೇಂದ್ರದಲ್ಲಿರುವ ಪಶುಪಾಲನಾ ಸಹಾಯಕ ನಿರ್ದೇಶಕರು ಮುಖ್ಯ ಕಾರ್ಯಾಲಯದ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಅಲ್ಲದೇ ಯಾವ ವೇಳೆಯಲ್ಲೂ ಕುಸಿದು ಬೀಳುವ ಹಂತದಲ್ಲಿದೆ. ದುರಸ್ತಿ ಮಾಡುವಂತೆ ಹಲವು ಬಾರಿ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ಕಚೇರಿ ಸಿಬ್ಬಂದಿ ಜೀವಭಯದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಸೋರುತ್ತಿರುವ ಕೊಠಡಿಯಲ್ಲೇ ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಇದನ್ನು ಸಂರಕ್ಷಿಸುವುದೇ ದೊಡ್ಡ ಸವಾಲಾಗಿದೆ.

ಕಟ್ಟಡವೇ ಇಲ್ಲ: ಜಿಲ್ಲೆಯಲ್ಲೇ ಹಸು, ಎಮ್ಮೆ, ಕುರಿ ಸೇರಿದಂತೆ ಅತಿ ಹೆಚ್ಚು ಜಾನುವಾರುಗಳನ್ನು ಹೊಂದಿರುವ ತಾಲೂಕು ಕೇಂದ್ರ ಇದಾಗಿದೆ. ಹುಣಸಗಿ ಮತ್ತು ಸುರಪುರ ಪಶು ಆಸ್ಪತ್ರೆಗಳನ್ನು ಹೊಂದಿದೆ. 12 ಪಶು ಚಿಕಿತ್ಸಾಲಯಗಳನ್ನು ಹೊಂದಿದ್ದು, 17 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ಬಾಚಿಮಟ್ಟಿ, ಹೆಮನೂರು ಪಶು ಚಿಕಿತ್ಸಾಲಯ ಕೇಂದ್ರಗಳಿಗೆ ಹಾಗೂ ಅಗತೀರ್ಥದಲ್ಲೂ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಟ್ಟಡವಿಲ್ಲ.

ನಿಂತ ಕಾಮಗಾರಿ: 2012-13ರಲ್ಲಿ 13 ಲಕ್ಷ ರೂ. ಅನುದಾನದಲ್ಲಿ ಇಲಾಖೆಗೆ ನೂತನ ಕಟ್ಟಡ ಮಂಜೂರಿಯಾಗಿತ್ತು. ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸಲಾಗಿತ್ತು. ಏಳು ವರ್ಷವಾದರೂ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿ ಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಭೂಸೇನಾ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದೆ.

Advertisement

ವಿದ್ಯುತ್‌ ಸಂಪರ್ಕವಿಲ್ಲ: ಶಾಸಕರ ತವರೂರು ಕೊಡೇಕಲ್‌, ಬಾಚಿಮಟ್ಟಿ, ಗುತ್ತಿಬಸವೇಶ್ವರ,
ಹೆಮನೂರು ಪಶು ಚಿಕಿತ್ಸಾಲಯಗಳಿಗೆ ಹಾಗೂ ಚೌಡೇಶ್ವರಿಹಾಳ, ಸೂಗೂರು, ತಿಂಥಿಣಿ, ರಾಜನಕೋಳೂರು, ಹಗರಟ್ಟಗಿ, ಹೆಬ್ಟಾಳ ಬಿ, ಚನ್ನೂರು, ಅಗತೀರ್ಥ, ಕೂಡಲಗಿ, ರಂಗಂಪೇಟ, ಮುದನೂರು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಗೆ ವಿದ್ಯುತ್‌ ಸಂಪರ್ಕವೇ ಇಲ್ಲ. ಆಧುನಿಕತೆಯಲ್ಲಿದ್ದು, ಅತಿ ಹೆಚ್ಚು ಜಾನವಾರು ಸಂಖ್ಯೆ ಹೊಂದಿರುವ ಗ್ರಾಮಗಳ ಪಶು ಇಲಾಖೆ ಕಟ್ಟಡಗಳಿಗೆ ಇದುವರೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸದಿರುವುದು ಇಲಾಖೆ,
ಜನಪ್ರತಿನಿ ಧಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

ಹುದ್ದೆಗಳು ಖಾಲಿ ಖಾಲಿ: ತಾಲೂಕಿನಲ್ಲಿ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಗೆ ಒಟ್ಟು 117 ಹುದ್ದೆಗಳ ಮಂಜೂರಾತಿಯಿದೆ. ಇದರಲ್ಲಿ 64 ಹುದ್ದೆಗಳು ಭರ್ತಿಯಾಗಿದ್ದು, 53 ಹುದ್ದೆಗಳು ಖಾಲಿ ಉಳಿದಿವೆ. ಹೀಗಾಗಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಇರುವ ಸಿಬ್ಬಂದಿಗಳೇ ಹೆಣಗಾಡುವಂತಾಗಿದೆ. ಗುಣಮಟ್ಟದ ಚಿಕಿತ್ಸೆಗಾಗಿ ರೈತರು ಖಾಸಗಿ ವೈದ್ಯರನ್ನು ಅವಲಂಬಿಸುವಂತಾಗಿದೆ. ಹುದ್ದೆಗಳ ನಿರ್ಮಾಣ ಕುರಿತು ಇಲಾಖೆ ಮೇಲಧಿ ಕಾರಿಗಳು ಸಾಕಷ್ಟು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಇಲಾಖೆ ಜಾಣ ಕುರುಡತನ ಪ್ರದರ್ಶಿಸುತ್ತಿದೆ. ಇದು ತಾಲೂಕಿನ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next