Advertisement

ದೀಕ್ಷಾರ್ಥಿ ಮೋನಿಕಾ ಭವ್ಯ ಮೆರವಣಿಗೆ

07:44 PM Jan 13, 2020 | |

ಸುರಪುರ: ಜೈನ್‌ ಧರ್ಮದ ದೀಕ್ಷಾರ್ಥಿ ಮೋನಿಕಾ ಭರತಕುಮಾರ ಜೈನ್‌ ಭವ್ಯ ಮೆರವಣಿಗೆ ರವಿವಾರ ನಗರದಲ್ಲಿ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಭಗವಾನ್‌ ಮಹಾವೀರ ಮಹಾರಾಜಕೀ ಜೈ, ಕುಂತುನಾಥ ಮಹಾರಾಜಕೀ ಜೈ, ಅಭಿನಂದನ್‌ ಚಂದ್ರಸಾಗರ ಮಹಾರಾಜ ಕೀ ಜೈ, ಧೀಕ್ಷಾರ್ಥಿ ಮೋನಿಕಾ ಮಾತಾಜೀ ಕೀ ಜೈ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದವು.

Advertisement

ಮೆರವಣಿಗೆ ಅಂಗವಾಗಿ ದೀಕ್ಷಾರ್ಥಿ ಮೋನಿಕಾ ಕುಂತುನಾಥ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸರ್ವಾಲಂಕಾರ ಭೂಷಿತಳಾಗಿದ್ದ ದೀಕ್ಷಾರ್ಥಿ ಮೋನಿಕಾ ಜೈನ್‌ ಸಿಂಗರಿಸಿದ ರಥವನ್ನು ಏರಿದರು. ಆಚಾರ್ಯ ಅಭಿನಂದನ್‌ ಚಂದ್ರಸಾಗರಜೀ ಮೆರವಣಿಗೆಗೆ ಚಾಲನೆ ನೀಡಿದರು.

ಸನ್ಯಾಸತ್ವ ಸ್ವೀಕಾರ ಅಂಗವಾಗಿ ದೀಕ್ಷಾರ್ಥಿ ಸರ್ವವನ್ನು ಪರಿತ್ಯಾಗ ಮಾಡುವ ನಿಯಮದಂತೆ ಸುವರ್ಣ, ರಜತ, ವಸ್ತ್ರ , ನಾಣ್ಯ, ಧವಸ-ಧಾನ್ಯ, ಬಿಸ್ಕಿಟ್‌, ಚಾಕಲೇಟ್‌ ಸೇರಿದಂತೆ ಇತರೆ ವಸ್ತುಗಳನ್ನು ರಸ್ತೆ ಎರಡು ಬದಿಯಲ್ಲಿ ನಿಂತಿದ್ದ ಜನರತ್ತ ತೂರಿದಳು. ಎಸೆದ ವಸ್ತುಗಳನ್ನು ಹಿಡಿದುಕೊಳ್ಳಲು ನೆರೆದ ಜನರು ಮುಗಿಬಿದ್ದರು. ಮೆರವಣಿಗೆ ಅಂಗವಾಗಿ ನಗರದ ರಸ್ತೆಗಳೆಲ್ಲ ಸಿಂಗಾರಗೊಂಡಿದ್ದವು. ಅಲ್ಲಲ್ಲಿ ರಸ್ತೆಗಳ ಮೇಲೆ ಬಣ್ಣ-ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಲಾಗಿತ್ತು. ಮೆರವಣಿಗೆ ಮಾರ್ಗದ ರಸ್ತೆಗಳಲ್ಲಿ ದೀಕ್ಷಾರ್ಥಿ
ಭಾವಚಿತ್ರದ ಕಟೌಟ್‌ಗಳು, ಶುಭಕೋರುವ ಪ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಕೆಲ ಕಡೆ ಸಮಾಜ ಬಾಂಧವರು ಟೆಂಟ್‌ ಹಾಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ಬಿಸ್ಕಿಟ್‌, ಬಾಳೆ ಹಣ್ಣು, ಇತರೆ ತಿನಿಸು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಒಟ್ಟಾರೆಯಾಗಿ ನಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಕುಂತುನಾಥ ಜೈನ್‌ ಶ್ವೇತಾಂಬರ ಮೂರ್ತಿಪೂಜಕ ಸಂಘದ ಪದಾಧಿಕಾರಿಗಳು, ಸದಸ್ಯರು ಮೆರವಣಿಗೆ ನೇತೃತ್ವ ವಹಿಸಿದ್ದರು. ಭಕ್ತಾದಿಗಳಿಗೆ ತೊಂದರೆ ಆಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮುಂಬೈ, ಪುಣೆ, ಬೀದರ, ಬೆಳಗಾವಿ, ಹೈದ್ರಾಬಾದ್‌, ಮುಜಫರಾಬಾದ, ರಾಯಚೂರು, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಜೈನ್‌ ಸಮುದಾಯ ಬಾಂಧವರು ಆಗಮಿಸಿದ್ದರು.

ದೇವಸ್ಥಾನದಿಂದ ಹೊರಟ ಮೆರವಣಿಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ವೇಣುಗೋಪಾಲಸ್ವಾಮಿ ದೇವಸ್ಥಾನ, ಲಕ್ಷ್ಮೀಶ ದೇವಸ್ಥಾನ ಮಾರ್ಗವಾಗಿ ಮಹಾತ್ಮ ಗಾಂಧೀ ಜಿ ವೃತ್ತ, ಅರಮನೆ ಮಾರ್ಗವಾಗಿ ದೇವಸ್ಥಾನದ ಆವರಣಕ್ಕೆ ತಲುಪಿತು. ಈ ವೇಳೆ ಗುರು ಅಭಿನಂದನ್‌ ಚಂದ್ರ ಸಾಗರಜೀ ಮಹಾರಾಜ ಮಾತನಾಡಿ, ಈ ಊರಿನ ಬಾಲಕಿ ನಿಮ್ಮೆಲ್ಲರ ಮುದ್ದಿನ ಮಗಳು ಕರುಳು ಬಳ್ಳಿ ಸಂಬಂಧ ಕಳಚಿಕೊಂಡು ಸನ್ಯಾಸ ದೀಕ್ಷೆ ಸ್ವೀಕರಿಸಿ ಜೈನ್‌ ಧರ್ಮದ ಪ್ರಚಾರಕ್ಕೆ ಮುಂದಾಗಿರುವ ಕಾರ್ಯ ಶ್ಲಾಘನೀಯ. ಆಕೆ ಕೈಗೊಳ್ಳುವ ಪುಣ್ಯ ಕಾರ್ಯದಿಂದ ಸಮುದಾಯಕ್ಕೆ ಅಷ್ಟೇ ಅಲ್ಲ, ತಾಲೂಕಿನ ಗೌರವ ಹೆಚ್ಚಾಗಿದೆ. ಲೋಕ ಕಲ್ಯಾಣಾರ್ಥವಾಗಿ ಧರ್ಮ ಕಾರ್ಯಕ್ಕೆ ಮಗಳನ್ನು ತ್ಯಾಗ ಮಾಡಿರುವ ನಿಮ್ಮೆಲ್ಲರ ಔದಾರ್ಯ ಸ್ತುತ್ಯಾರ್ಹವಾಗಿದೆ ಎಂದರು.

Advertisement

ಧೀಕ್ಷಾರ್ಥಿ ಮೋನಿಕಾ ಜೈನ್‌ ಈಗಾಗಲೇ ಸಕರತ್ವ ಪೂಜೆ ಕೈಗೊಳ್ಳುವ ಮೂಲಕ ಸನ್ಯಾಸ  ಧೀಕ್ಷಾ ಸ್ವೀಕಾರದ ವಿಧಿ ವಿಧಾನಗಳನ್ನೆಲ್ಲ ಮುಗಿಸಿದ್ದಾಳೆ. ಸಂಜೆ ನಡೆಯುವ ವಿದಾಯ (ಕುಟುಂಬ ಮತ್ತು ಪುರದ ಬೀಳ್ಕೊಡುಗೆ) ಕಾರ್ಯಕ್ರಮದೊಂದಿಗೆ ಒಂದು ಹಂತದ ಕಾರ್ಯ ಪೂರ್ಣಗೊಂಡಿತು. ರಾಜಸ್ಥಾನದಲ್ಲಿ ಫೆ. 1ರಂದು ನಡೆಯುವ ಧೀಕ್ಷಾರ್ಥಿ ಮೋನಿಕಾಳ ಸನ್ಯಾಸ ಧೀಕ್ಷಾ ಸ್ವೀಕಾರ ಸಮಾರಂಭದಲ್ಲಿ ತಾವೆಲ್ಲ ಭಾಗವಹಿಸಿ, ಆಚಾರ್ಯ ಮತ್ತು ಭಗವಾನರ ಕೃಪಾರ್ಶೀವಾದಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next