ಸುರಪುರ: ಸಿಎಂ ಬಿ.ಎಸ್.ಯಡಿಯೂರಪ್ಪನವರು ತಾಲೂಕಿನಲ್ಲಿ ಕೃಷ್ಣಾ ನದಿ ಪ್ರವಾಹದಿಂದ ಉಂಟಾಗಿದ್ದ ಬೆಳೆಹಾನಿ ವೀಕ್ಷಿಸದೆ ಹೋದದ್ದು ನೆರೆ ಸಂತ್ರಸ್ತ ರೈತರಲ್ಲಿ ನಿರಾಸೆ ತಂದಿತು. ಪ್ರವಾಹದಿಂದ ಉಂಟಾಗಿದ್ದ ಬೆಳೆ ಹಾನಿ ಸಮೀಕ್ಷೆಗೆ ಆಗಮಿಸಿದ್ದ ಸಿಎಂ ದೇವಾಪುರ ಜಡಿ ಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಠದ ಶಿವಮೂರ್ತಿ ಶಿವಾಚಾರ್ಯರಿಂದ ಆಶೀರ್ವಾದ ಪಡೆದು ಐದೇ ನಿಮಿಷದಲ್ಲೇ ಅಲ್ಲಿಂದ ನಿರ್ಗಮಿಸಿದರು.
ಈ ವೇಳೆ ಹೋಗುವ ದಾರಿಯಲ್ಲಿ ಕೆಲವರ ಮನವಿ ಸ್ವೀಕರಿಸಿದರು. ಶಾಸಕ ರಾಜುಗೌಡರ ಒತ್ತಾಯಕ್ಕೆ ಮಣಿದು ಹಾದಿ ಮಧ್ಯೆ ಕಾರಿನಿಂದ ಇಳಿದು ಕಾಟಾಚಾರಕ್ಕೆಂಬಂತೆ ದೇವಾಪುರ ಹಿರಿಹಳ್ಳದ ಹತ್ತಿರ ದಾಳಿಂಬೆ ನಾಶವಾಗಿರುವುದನ್ನು ವೀಕ್ಷಿಸಿದರು. ಸಿಎಂಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲೆಂದು ಮಠದ ಕಲ್ಯಾಣ ಮಂಟಪದಲ್ಲಿ ಬೆಳಗಿನಿಂದ ರೈತರು ಕುಳಿತುಕೊಂಡಿದ್ದರು. ಆದರೆ, ಸಿಎಂ ಅವರನ್ನು ಭೇಟಿ ಮಾಡದೆ ಹಾಗೇ ತೆರಳಿದರು.
ತಾಲೂಕಿನಲ್ಲಿ ಸಂಭವಿಸಿದ ಭೀಕರ ಪ್ರವಾಹ ಚಿತ್ರಗಳನ್ನು ಕಲ್ಯಾಣ ಮಂಟಪದ ನಾಲ್ಕು ಗೋಡೆಗಳಲ್ಲಿ ನೇತು ಹಾಕಲಾಗಿತ್ತು. ಪ್ರವಾಹದ ಭೀಕರತೆಯನ್ನು ಪ್ರದರ್ಶಿಸುವ ವೀಡಿಯೋ ಚಿತ್ರಣ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಿಎಂ ಇದಾವುದನ್ನು ನೋಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಶಾಸಕರಾದ ರಾಜುಗೌಡ, ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್, ಎಸ್ಪಿ ಋಷಿಕೇಶ ಭಗವಾನ್ ಸೋನಾವಣೆ, ಪಿಐ ಆನಂದರಾವ್, ಬಿಜೆಪಿ ತಾಲೂಕು ಅಧ್ಯಕ್ಷ ಅಮರಣ್ಣ ಹುಡೇದ್, ಪ್ರಮುಖರಾದ ರಾಜಾ ಹಣಮಪ್ಪ ನಾಯಕ ತಾತಾ, ಡಾ| ಸುರೇಶ್ ಸಜ್ಜನ್, ಮರಲಿಂಗಪ್ಪ ಕರ್ನಾಳ, ಬಾಬುಗೌಡ ಪಾಟೀಲ, ಎಚ್.ಸಿ. ಪಾಟೀಲ, ಬಸವರಾಜ ಸ್ವಾಮಿ, ದೊಡ್ಡದೇಸಾಯಿ ದೇವರಗೋನಾಲ, ಬಿ.ಎಂ. ಹಳ್ಳಿಕೋಟಿ ಇದ್ದರು.