ಸುರಪುರ: ಕೊರಾನಾ ವೈರಸ್‌ನಿಂದ ಇಡೀ ದೇಶವೇ ತಲ್ಲಣವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ. ಈ ಧಿಶೆಯಲ್ಲಿ ಸಂಘಟನೆ ಪದಾಧಿಕಾರಿಗಳು ವೈಯಕ್ತಿಕ ಕೆಲಸ ಬದಿಗಿಡಬೇಕು. ತಾತ್ಕಾಲಿಕವಾಗಿ ಹೋರಾಟ ಕೈ ಬಿಟ್ಟು ಪ್ರತಿ ಹಳ್ಳಿಹಳ್ಳಿಗಳಿಗೆ ತೆರಳಿ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ ಕರೆ ನೀಡಿದರು.
ನಗರದ ಟೇಲರ್ ಮಂಜಿಲ್‌ನಲ್ಲಿ ಶುಕ್ರವಾರ ದಲಿತ ಸೇನೆ ತಾಲೂಕು ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ದೇಶದ ಜನರನ್ನು ಸಾವಿನ ಮನೆಯಿಂದ ಹೇಗೆ ರಕ್ಷಿಸಬೇಕು. ಯಾವ ರೀತಿಯ ರಕ್ಷಣೆ ಮಾಡಬೇಕು ಎಂಬ ಆತಂಕ ದೇಶದಲ್ಲಿ ಸೃಷ್ಟಿಯಾಗಿದೆ. ಆತಂಕದಲ್ಲಿರುವ ಜನರಿಗೆ ಜಾಗೃತಿ ಮೂಡಿಸಿ ಆತ್ಮಸ್ಥೈರ್ಯ ನೀಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಘಟನೆ ತಾಲೂಕು ಹೋಬಳಿ ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಇದೊಂದು ರಾಷ್ಟ್ರೀಯ ಸೇವೆ ಎಂದು ಭಾವಿಸಿ ಗ್ರಾಮಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ವೈರಸ್ ನಿಯಂತ್ರಣಕ್ಕೆ ಬಂದ ನಂತರ ಸುರಪುರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸುವ ಯೋಜನೆ ಇದೆ. ಈಗಿನಿಂದಲೇ ತಳಮಟ್ಟದಿಂದ ಸಂಘಟನೆ ಬಲಪಡಿಸಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ, ವೈರಸ್ ಬಗೆ ಜಾಗೃತಿ ಮೂಡಿಸಲು ಹೋಬಳಿ ಮತ್ತು ಗ್ರಾಮ ಘಟಕಗಳ ಪದಾಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಹಳ್ಳಿಗಳಲ್ಲಿ ಕೆಲಸ ನಡೆಯುತ್ತಿದೆ. ಸಂಘಟನೆಯಲ್ಲಿ ಸಮರ್ಪಕವಾಗಿ ಸ್ಪಂದಿಸದಿರುವ ಕೆಲ ಪದಾಧಿಕಾರಿಗಳನ್ನು ತೆಗೆದುಹಾಕಿ ಹೊಸದಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ವೇಳೆ ಮೌನೇಶ ಹುಣಸಿಕಹೊಳೆ, ಬನ್ನಪ್ಪ ಕೋನಾಳ ಉಪಾಧ್ಯಕ್ಷರನ್ನಾಗಿ ಮತ್ತು ಗೋಪಾಲ ಗೋಗಿಕೆರಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಹಾಗೂ ನಾಗೂ ಗೋಗಿಕೆರಾ ಅವರನು ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸೇನೆ ನಗರ ಮತ್ತು ಗ್ರಾಮೀಣ ಶಾಖೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.