ಸುರಪುರ: ತಾಲೂಕಿನ ದೇವಾಪುರದಲ್ಲಿ ರವಿವಾರ ನಡೆಯುತ್ತಿದ್ದ ಬಾಲ್ಯ ವಿವಾಹ ಅಧಿಕಾರಿಗಳ ಸಮಯ ಪ್ರಜ್ಞೆ ಮತು ಮಿಂಚಿನ ಕಾರ್ಯಾಚರಣೆಯಿಂದ ತಡೆ ಬಿದ್ದಿದೆ.
ದೇವಾಪುರದ ಕುಟುಂಬವೊಂದರಲ್ಲಿ ಬಾಲ್ಯ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ರವಿವಾರ ಮದುವೆ ನಡೆಯಲಿದೆ ಎಂಬ ಖಚಿತ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ತಾಲೂಕು ದಂಡಾಧಿಕಾರಿ, ಪೊಲೀಸರು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮದುವೆ ಸಿದ್ಧತೆಯಲ್ಲಿದ್ದ ಪಾಲಕ ಪೋಷಕರೊಂದಿಗೆ ಅಧಿಕಾರಿಗಳು ಚರ್ಚೆ ನಡೆಸಿ ವಯಸ್ಸು ಮತ್ತು ಇತರೆ ದಾಖಲೆ ಪರಿಶೀಲಿಸಿದರು. ಈ ವೇಳೆ ಆಕೆಗೆ 15 ವರ್ಷ ಎಂದು ಖಚಿತವಾಯಿತು. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಪ್ರಕಾರ ಮದುವೆ ಮಾಡುವುದು ತಪ್ಪು. ಇದೊಂದು ಅಪರಾಧಿಕ ಕೃತ್ಯವಾಗುತ್ತದೆ ಕಾರಣ ಮದುವೆ ಕೈ ಬಿಡುವಂತೆ ತಿಳಿ ಹೇಳಿದರು.
ಈ ವೇಳೆ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ಸೋಪಿಯಾಸುಲ್ತಾನ್ ವಯ ಪೂರ್ವದಲ್ಲಿಯೇ ಮದುವೆ ಮಾಡುವುದು ಅಪರಾಧ. ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಆಗುವವರೆಗೆ ಮದುವೆ ಮಾಡುವಂತಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿ ಮದುವೆ ಮಾಡಿದಲ್ಲಿ ದಂಡ ಮತ್ತು ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಾರಣ ಅನಗತ್ಯವಾಗಿ ಸಮಸ್ಯೆ ಮೈಮೇಲೆ ಎಳೆದುಕೊಳ್ಳುವುದು ಬೇಡ. ಇದರೊಂದಿಗೆ ಏನೊಂದು ತಿಳಿಯದ ಮತ್ತು ಪ್ರಾಪಂಚಿಕ ಜ್ಞಾನ ವಿಲ್ಲದೆ ಇರುವ ಬಾಲಕಿಗೆ ಮದುವೆ ಮಾಡುವುದರಿಂದ ಆಕೆ ಬದುಕು ಕೂಡ ಹಾಳು ಮಾಡಿದಂತ್ತಾಗುತ್ತದೆ. ಕಾರಣ ಮದುವೆ ಕೈಬಿಡುವಂತೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಸರಕಾರ ಹೊಸದಾಗಿ ಸಪ್ತಪದಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಕುಟುಂಬಕ್ಕೆ ಸರಕಾರ ಧನ ಸಹಾಯ ನೀಡುತ್ತದೆ. ನೀವು ಕಾರ್ಮಿಕರಾಗಿದ್ದಲ್ಲಿ ಕಾರ್ಮಿಕ ಇಲಾಖೆಯಿಂದ ಕೂಡ ಧನ ಸಹಾಯ ಸಿಗುತ್ತದೆ. ಕಾರಣ ಸದ್ಯಕ್ಕೆ ಮದುವೆ ವಿಚಾರ ಕೈ ಬಿಡಿ. ಮಗಳಿಗೆ 18 ವರ್ಷ ಪೂರ್ಣಗೊಂಡ ನಂತರ ಸರಕಾರದ ಯಾವುದಾದರೂ ಯೋಜನೆಯಲ್ಲಿ ಮದುವೆ ಮಾಡಿ. ಇದರಿಂದ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಹೇಳಿದರು.
ಕೊನೆಗೂ ಅಧಿಕಾರಿಗಳ ಸಲಹೆ ಮತ್ತು ಸೂಚನೆ ಮತ್ತು ಮಾರ್ಗದರ್ಶನಕ್ಕೆ ಸಮ್ಮತಿ ಸೂಚಿಸದ ಕುಟುಂಬಸ್ಥರು ಮದುವೆ ಕೈಬಿಡುವ ನಿರ್ಧಾರ ಮಾಡಿದರು. ಮಗಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೆ ಮದುವೆ ಮಾಡುವುದಿಲ್ಲ ಎಂದು ಲಿಖೀತ ಹೇಳಿಕೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ದಶರಥ, ಕಾನೂನು ಸಲಹೆಗಾರ ರಾಜೇಂದ್ರ ಯಾದವ, ಕಂದಾಯ ನಿರೀಕ್ಷಕ ವಿಠ್ಠಲ , ಗಾಲೆ ನಟರಾಜ, ಪಿಎಸ್‌ಐ ಶ್ಯಾಮಸುಂದರ ನಾಯಕ, ಪಿಡಿಒ ಮತ್ತು ಅಂಗನಾಡಿ ಕಾರ್ಯಕರ್ತೆ ಸೇರಿದಂತೆ ಇದ್ದರು.