Advertisement

ಸುರಪುರ:ರಸ್ತೆ ಅಗಲೀಕರಣಕ್ಕೆ ಚಾಲನೆ

06:41 PM Feb 04, 2021 | Team Udayavani |

ಸುರಪುರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಂಗಂಪೇಟೆ- ತಿಮ್ಮಾಪುರ ನಗರದ ರಸ್ತೆ ಅಗಲೀಕರಣಕ್ಕೆ ಬುಧವಾರ ಚಾಲನೆ ನೀಡಲಾಯಿತು. ರಸ್ತೆ ಅಗಲೀಕರಣ ಕುರಿತು ನಗರಸಭೆಯಿಂದ ಕೆಲ ದಿನಗಳಿಂದ ಸಾಕಷ್ಟು ಪ್ರಚಾರ ಮಾಡಲಾಗಿತ್ತು. ನಿವಾಸಿಗಳು ಕಳೆದ ಎರಡ್ಮೂರು ದಿನಗಳಿಂದ ಸ್ವಯಂಪ್ರೇರಿತರಾಗಿ ಮನೆ, ಅಂಗಡಿ, ಕಟ್ಟಡ ತೆರವುಗೊಳಿಸುವ ಕಾರ್ಯದಲ್ಲಿ ಮುಂದಾಗಿದ್ದರು. ನಗರಸಭೆಯವರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದು
ಅಗಲೀಕರಣಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಇದೀಗ ಜೆಸಿಬಿ ಯಂತ್ರಗಳು ಕೆಲಸ ಆರಂಭಿಸಿವೆ.

Advertisement

ರಸ್ತೆ ತುಂಬ ಕಲ್ಲು-ಮಣ್ಣು ರಾಶಿ: ರಂಗಂಪೇಟೆ ಆಟೋ ನಿಲ್ದಾಣದಿಂದ ಪ್ರಾರಂಭವಾದ ರಸ್ತೆ ವಿಸ್ತರಣೆ ಮಧ್ಯಾಹ್ನದವರೆಗೆ ಮುಖ್ಯ ರಸ್ತೆ ಅರ್ಧ ದಾಟಿತ್ತು. ಜೆಸಿಬಿ ಹೊಡೆತಕ್ಕೆ ಕಟ್ಟಡ, ಮನೆ ನೆಲಕ್ಕುರುಳಿದವು. ರಸ್ತೆ ತುಂಬ ಕಲ್ಲು, ಮಣ್ಣುಗಳ ರಾಶಿಯಿಂದ ರಂಗಂಪೇಟೆ ಸಂಪೂರ್ಣ ಧೂಳು ಮಯವಾಗಿತ್ತು. ವಿದ್ಯುತ್‌ ತಂತಿ, ಕೇಬಲ್‌ ವೈರ್‌ಗಳು ಕತ್ತರಿಸಿ ಬಿದ್ದವು. ವಿದ್ಯುತ್‌ ಸರಬರಾಜು ಸ್ಥಗಿತಗೊಳಿಸಲಾಗಿತ್ತು.

ಈ ವೇಳೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲನಾಯಕ ಜೇವರ್ಗಿ, ನಗರಸಭೆ ಪೌರಾಯುಕ್ತ ಕೆ. ಜೀವನಕುಮಾರ, ನಗರಸಭೆ ಸದಸ್ಯ ಮೊಹ್ಮದ್‌ಗೌಸ್‌, ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಗೇರೆ, ಯೋಜನಾಧಿಕಾರಿ ಓಂಕಾರ ಪೂಜಾರಿ, ಎಇ ಶಿವರಾಜ, ಜೆಇ ಮಹೇಶ ಇತರರು ಇದ್ದರು.

ವಿದ್ಯುತ್‌ ವ್ಯತ್ಯಯ: ರಂಗಂಪೇಟೆ-ತಿಮ್ಮಾಪುರದಲ್ಲಿ ರಸ್ತೆ ಅಗಲೀಕರಣ ನಡೆದಿದ್ದು ವಿದ್ಯುತ್‌ ಕಂಬ, ಟ್ರಾನ್ಸ್‌ ಫಾರ್ಮರ್‌ ತೆರವು, ಲೈನ್‌ ಕಟ್‌ ಸೇರಿ ಇತರೆ ಕೆಲಸಗಳು ಪ್ರಗತಿಯಲ್ಲಿರುತ್ತವೆ. ಆದ್ದರಿಂದ ನಾಲ್ಕಾರು ದಿನಗಳವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಹಕಸುವಂತೆ ಎಂದು ಜೆಸ್ಕಾಂ ಎಇಇ ಸೆಕ್ಸೆನ್‌ ಆಫೀಸರ್‌ ಈರಣ್ಣ ಅಳಿಚೆಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಿವೃದ್ಧಿಗೆ 5.52 ಕೋಟಿ ಅನುದಾನ ರಸ್ತೆ ಅಗಲೀಕರಣ ಯೋಜನೆಗೆ 2014ರಲ್ಲಿಯೇ ಅನುಮೋದನೆ ದೊರಕಿದೆ. ಆದರೆ ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿತ್ತು. 2.5 ಕಿಮೀ ರಸ್ತೆ ಅಗಲೀಕರಣಕ್ಕೆ ಒಳಪಟ್ಟಿದ್ದು 5.52 ಕೋಟಿ ಅನುದಾನ ಮಂಜೂರಾಗಿದೆ. 36 ಅಡಿ ಸಿಸಿ ರಸ್ತೆ ನಿರ್ಮಾಣದ ಜತೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಮತ್ತು ನೀರಿನ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗುವುದು. ಅಗಲೀಕರಣದಿಂದ 46 ಬಡ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ತಾಲೂಕು ಆಡಳಿತದಿಂದ ಅವರಿಗೆ ತಾತ್ಕಾಲಿಕ ಶೆಡ್‌ ವ್ಯವಸ್ಥೆ ಮಾಡಲು ಶಾಸಕರು ಸೂಚಿಸಿದ್ದಾರೆ. ಈ ಕುರಿತು ಶೀಘ್ರ ಅಧ್ಯಕ್ಷ ಮತ್ತು ಸದಸ್ಯರ ಸಭೆ ಕರೆದು ನಿರ್ಣಯಿಸಲಾಗುವುದು ಎಂದು ನಗರಸಭೆ ಪೌರಾಯಕ್ತ ಜೀವನಕುಮಾರ ಕಟ್ಟಿಮನಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next