ಬೆಂಗಳೂರು: ಹಾಸನದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಡಾ| ಸೂರಜ್ ರೇವಣ್ಣ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಅಥವಾ ಚುನಾವಣೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಸರಕಾರ ಹಾಗೂ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಚನ್ನರಾಯಪಟ್ಟಣ ತಾಲೂಕು ಕುಂದೂರು ಗ್ರಾಮದ ನಿವಾಸಿ ಕೆ.ಎಲ್. ಹರೀಶ್ ಸಲ್ಲಿಸಿರುವ ಚುನಾವಣ ತಕರಾರು ಅರ್ಜಿಯು ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸಸದಸ್ಯ ನ್ಯಾಯಪೀಠದಲ್ಲಿ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಸ್ವಲ್ಪ ಹೊತ್ತು ವಾದ ಆಲಿಸಿದ ನ್ಯಾಯಪೀಠ, ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದಿಸಿದರು.
ಇದನ್ನೂ ಓದಿ:ಸಂಸದ ತೇಜಸ್ವಿ ಸೂರ್ಯ ಜನತೆಯ ದಾರಿ ತಪ್ಪಿಸುತ್ತಿದ್ದಾರೆ : ಡಾ.ಶಂಕರ್ ಗುಹಾ
ಸೂರಜ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದ ಅರ್ಜಿ ನಮೂನೆ 26ರಲ್ಲಿ ಪತ್ನಿಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಿಲ್ಲ. ನಗದು, ಆಸ್ತಿ, ಬ್ಯಾಂಕ್ ಖಾತೆ ಮುಂತಾದವುಗಳಲ್ಲಿ ಪತ್ನಿಗೆ ಸಂಬಂಧಿಸಿದ ಕಾಲಂಗಳಲ್ಲಿ “ಅನ್ವಯವಾಗುವುದಿಲ್ಲ’ ಎಂದು ಉಲ್ಲೇಖಿಸಿದ್ದಾರೆ. ಜತೆಗೆ ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಆದ್ದರಿಂದ, ಸೂರಜ್ ರೇವಣ್ಣ ಅವರ ನಾಮಪತ್ರವನ್ನು ಅಂಗೀಕರಿಸಿ ಜಿಲ್ಲಾ ಚುನಾವಣಾಧಿಕಾರಿ ನ. 24ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು. ಈ ಸಂಬಂಧ ಅರ್ಜಿದಾರರು ನ. 25ರಂದು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಅದರಂತೆ, ಸೂರಜ್ ಉಮೇದುವಾರಿಕೆ ಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.