Advertisement

Suragi Tree: ಸುರಗಿ ಸಂಭ್ರಮ: ರೆಂಬೆಗಳ ಮೇಲೆ ನಕ್ಷತ್ರ ಲೋಕ!

01:42 PM Apr 08, 2024 | Team Udayavani |

ಸಾಗರದಿಂದ ಒಂದರ್ಧ ಕಿಲೋಮೀಟರ್‌ ದೂರದಲ್ಲಿ ಐದು ಎಕರೆಗಳಷ್ಟು ವಿಸ್ತೀರ್ಣದ ಜಾಗ. ಅದರಲ್ಲಿ ಒಂದೆರಡು ಎಕರೆ ಅಡಿಕೆ ತೋಟ. ಉಳಿದ ಜಾಗದಲ್ಲಿ ನೈಸರ್ಗಿಕ ಅರಣ್ಯ ಬೆಳೆಸುವ ಯೋಚನೆ ಮಾಡಿ ಪ್ರಗತಿಪರ ಕೃಷಿಕ ಅಶ್ವಥ್‌ ನಾರಾಯಣ ಅವರು ತೇಗ, ಮತ್ತಿ, ಹಲಸು, ಸುರಗಿ, ರಂಜಲ, ಹೊನ್ನೆ ಹೀಗೆ ವಿವಿಧ ರೀತಿಯ ಮರಗಳನ್ನು ಬೆಳೆಸಿದ್ದಾರೆ. ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟಿರುವ ಅವರು ತಮ್ಮ ತೋಟಕ್ಕೆ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳ ಬಳಕೆಯನ್ನು ನಿಷೇಧಿಸಿದ್ದಾರೆ. ಹಾಗಾಗಿ, ಮ್ಯಾಕ್ರೋ ಫೋಟೋಗ್ರಫಿಗೆ ಇಲ್ಲಿ ಹೆಚ್ಚು ಅವಕಾಶ. ಅನೇಕ ಜಾತಿಯ ಕ್ರಿಮಿ-ಕೀಟಗಳು, ಚಿಟ್ಟೆ-ಪತಂಗಗಳು ಅನಾಯಾಸವಾಗಿ ಸಿಗುತ್ತವೆ. ಕಳೆದ ವಾರ ಹೀಗೆ ಮ್ಯಾಕ್ರೋ ಫೋಟೋಗ್ರಫಿಗೆಂದು ಹೋದಾಗ ತೋಟದ ಸುತ್ತಲಿನ ಪರಿಸರವೆಲ್ಲ ವಿಶಿಷ್ಟ ಪರಿಮಳದಿಂದ ಘಮಘಮಿಸುತ್ತಿತ್ತು. ಜೇನ್ನೊಣಗಳ ಝೇಂಕಾರ ಬೇರೆ. “ಈ ವರ್ಷ ಸುರಗಿ ಮರ ಹೂ ಬಿಟ್ಟಿದೆ’ ಎನ್ನುತ್ತಾ ಖುಷಿಯಿಂದ ಅಶ್ವಥ್‌ ಅವರು ನಮ್ಮನ್ನು ಸುರಗಿ ಮರದೆಡೆಗೆ ಕರೆದೊಯ್ದರು. ಮರ ತುಂಬಾ ದೊಡ್ಡದೇನಲ್ಲ. ಆದರೆ, ಆ ಮರದ ತುಂಬೆಲ್ಲ ಚಿಕ್ಕ ಚಿಕ್ಕ ಮೊಗ್ಗು-ಹೂವುಗಳ ರಾಶಿ ರಾಶಿ. ಎಲೆಗಳನ್ನು ಹೊರತುಪಡಿಸಿ ಮರದ ಕಾಂಡಗಳನ್ನೆಲ್ಲ ಈ ಹೂವುಗಳೇ ಆಕ್ರಮಿಸಿದ್ದವು. ಮರದ ಕೆಳಗೆ ಉದುರಿ ಬಿದ್ದ ಹೂವಿನದೇ ನೆಲ ಹಾಸು. ಜೇನು, ಮಿಶ್ರಿ, ದುಂಬಿಗಳ ಹಾಡು-ಹಾರಾಟ. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಹಳ್ಳಿಯ ಹೆಂಗಸರು ಮಾರಾಟಕ್ಕೆ ತರುತ್ತಿದ್ದ ಸುರಗಿ ಹೂವಿನ ಮಾಲೆ ನೋಡಿದ್ದೆನಾದರೂ ಹೀಗೆ ಮರದಲ್ಲಿ ಹೂ ಬಿಟ್ಟಿದ್ದನ್ನು ನೋಡಿರಲಿಲ್ಲ.

Advertisement

ಬಿಳಿ/ಕೆನೆ ಬಣ್ಣದ ಹೂವು

ಕನ್ನಡದಲ್ಲಿ ಸುರಗಿ ಅಥವಾ ಸುರ್ಗಿ, ಮರಾಠಿಯಲ್ಲಿ ಸುರಂಗಿ, ಬೆಂಗಾಲಿಯಲ್ಲಿ ನಾಗೇಶ್ವರ, ಸಂಸ್ಕೃತದಲ್ಲಿ ಪುನ್ನಗ ಎಂದೆಲ್ಲ ಕರೆಯಲ್ಪಡುವ ಈ ಹೂವಿನ ಸಸ್ಯಶಾಸ್ತ್ರೀಯ ಹೆಸರು ಮಮ್ಮಿಯಾ ಸುರಿಗಾ. ಇದು ಕ್ಯಾಲೋಫಿಲೇಸೀ ಕುಟುಂಬಕ್ಕೆ ಸೇರಿದ ಹೂವು. ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಮಲೆನಾಡಿನಲ್ಲಿ, ಕರಾವಳಿಯ ಕಾಡುಗಳಲ್ಲಿ ಇವು ಹೆಚ್ಚಾಗಿ ಕಂಡುಬರುತ್ತವೆ. ಮರಗಳು ಧೃಢವಾಗಿದ್ದು ಅಗಲವಾದ, ಸದಾ ಹಸಿರು ಬಣ್ಣದ ಹೊಳಪಿನ ಎಲೆಗಳಿಂದ ಕೂಡಿರುತ್ತದೆ. ವರ್ಷವಿಡೀ ಹಸಿರು ಮೇಲ್ಚಾವಣಿಯಂತಿದ್ದು ಅನೇಕ ಪಕ್ಷಿಗಳಿಗೆ, ಸಸ್ತನಿಗಳಿಗೆ ಆವಾಸ ಸ್ಥಾನ. ಇವು ತೇವಾಂಶವುಳ್ಳ, ಆದರೆ, ನೀರು ಬಸಿದು ಹೋಗುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಫೆಬ್ರುವರಿ, ಮಾರ್ಚ್‌ ತಿಂಗಳು ಈ ಮರ ಹೂ ಬಿಡುವ ಸಮಯ. ಸುಂದರವಾದ ದುಂಡನೆಯ ಮೊಗ್ಗುಗಳು ನಾಲ್ಕು ದಳಗಳ ಬಿಳಿ ಅಥವಾ ಕೆನೆಬಣ್ಣದ ಹೂವುಗಳಾಗಿ ಅರಳುತ್ತವೆ. ಹೂವಿನ ಸುವಾಸನೆ ಮತ್ತು ಮಕರಂದದ ಆಕರ್ಷಣೆಗೆ ಒಳಗಾದ ಜೇನ್ನೊಣಗಳು ಪರಾಗಸ್ಪರ್ಶಕ್ಕೆ ಕಾರಣವಾಗಿ ಈ ಮರಗಳು ಹಸಿರು ಬಣ್ಣದ ಕಾಯಿಗಳನ್ನು ಬಿಡುತ್ತವೆ. ಪರಾಗ ಸ್ಪರ್ಶವಾದ ನಂತರ 40 ರಿಂದ 45 ದಿನಗಳಲ್ಲಿ ಅವು ಹಣ್ಣಾಗ ತೊಡಗುತ್ತವೆ. ಈ ಹಣ್ಣುಗಳು ಅನೇಕ ಬಗೆಯ ಪಕ್ಷಿ ಸಸ್ತನಿಗಳಿಗೆ ಆಹಾರದ ಮೂಲ. ಬೀಜ ಪ್ರಸರಣಕ್ಕೂ ಕಾರಣವಾಗುತ್ತವೆ.

ರೆಂಬೆಗಳ ಮೇಲೆ ಅರಳುತ್ತದೆ!

ಸುರಗಿ ಪುಟ್ಟ ಹೂವು. ಅದಕ್ಕೆ ಒಂದಿಂಚು ಉದ್ದದ ತೊಟ್ಟು. ಆ ತೊಟ್ಟಿನ ಬುಡದಲ್ಲಿ ಎರಡು ಸಿಪ್ಪೆಗಳು, ಬಿಳಿ ಅಥವಾ ಕೆನೆ ಬಣ್ಣದ ನಾಲ್ಕು ಪಕಳೆಗಳ ಹೂವಿನ ಮಧ್ಯ ಭಾಗದಲ್ಲಿ ಹಳದಿ ಕೇಶರಗಳ ಸಮೂಹ. ವಿಶೇಷವೆಂದರೆ ಸುರಗಿ ಹೂವು, ಕೊಂಬೆಯ ಎಲೆಗಳ ಎಸಳಿನೆಡೆಯಲ್ಲಿ ಹೂ ಬಿಡದೆ ರೆಂಬೆಗಳ ಮೇಲೆಯೇ ಬಿಡುತ್ತದೆ. ಮೊಗ್ಗು ಬಿಟ್ಟಾಗ ಆಗ ತಾನೇ ಬಿರಿದ ಹೊದಳನ್ನೋ ಅಥವಾ ಮುತ್ತನ್ನೋ ಕೊಂಬೆಗೆ ಅಂಟಿಸಿದಂತೆ ಕಾಣುತ್ತವೆ. ಸಾಮಾನ್ಯವಾಗಿ ಎಲ್ಲಾ ಹೂವುಗಳೂ ಒಂದು ದಿನವೋ, ಒಂದು ವಾರವೋ ಅರಳಿ- ಪರಿಮಳ ಬೀರಿ ನಂತರ ಬಾಡಿ ಹೋಗುತ್ತವೆ. ಬಾಡಿದ ನಂತರ ಹೂವಿನಿಂದ ಯಾವುದೇ ಸುವಾಸನೆ ಬರುವುದಿಲ್ಲ. ಆದರೆ, ಸುರಗಿಯ ಹೂವು ಮಾತ್ರ ಒಣಗಿದ ನಂತರವೂ ಹಲವು ತಿಂಗಳುಗಳ ಕಾಲ ಪರಿಮಳ ಬೀರುತ್ತಲೇ ಇರುತ್ತದೆ.

Advertisement

ವರ್ಷಾನುಗಟ್ಟಲೆ ಬಾಳಿಕೆ!

ಸುರಗಿಯು ಒಣಗಿದ ನಂತರ ಸೂಸುವ ಕಂಪು ಇನ್ನೂ ತೀಕ್ಷ್ಣ. ಮರದಲ್ಲಿ ಹೂವು ಅರಳಿದ ಮೇಲೆ ಜೇನ್ನೊಣಗಳ ಕಾಟ ಜಾಸ್ತಿ. ಹಾಗಾಗಿ, ಮೊಗ್ಗನ್ನೇ ಬಿಡಿಸುವ ಪರಿಪಾಠ. ಅಥವಾ ನಸುಕಿನಲ್ಲಿಯೇ ಹೂವು ಕೊಯ್ಯುತ್ತಾರೆ. ಮಲೆನಾಡಿಗರು ಮತ್ತು ಕರಾವಳಿಯ ಜನ ಹಾಗೆ ಸಂಗ್ರಹಿಸಿದ ಸುರಗಿಯ ಹೂಗಳನ್ನು ಶುಭ್ರವಾದ ಬಟ್ಟೆಯಲ್ಲಿ ಕಟ್ಟಿಟ್ಟು, ಒಣಗಿಸಿ ಮರುದಿನ ಆ ಹೂವಿನ ತೊಟ್ಟು ತುಂಡರಿಸಿ ಅದರ ಸಿಪ್ಪೆಗಳನ್ನು ಮಡಚಿ ಆ ಸಿಪ್ಪೆಗಳನ್ನೂ ಸೇರಿಸಿ ಎಣ್ಣೆ ಹಚ್ಚಿದ ಸೂಜಿಯಿಂದ ಒಂದೊಂದೇ ಹೂವುಗಳನ್ನು ಪೋಣಿಸಿ ಹಾರ ತಯಾರಿಸುತ್ತಾರೆ. ಹೀಗೆ ತಯಾರಾದ ಹಾರಗಳನ್ನು 5-6 ದಿನ ಬೆಳಗಿನ ಹೊತ್ತು ಹುಲ್ಲಿನ ಮೇಲೆ ಅಥವಾ ಅಡಿಕೆಯ ಹಾಳೆಗಳ ಮೇಲೆ ಹಾಸಿ ಒಣಗಿಸುತ್ತಾರೆ. ಮತ್ತೆ ಒಂದು ವಾರ ಇಬ್ಬನಿ ಬೀಳುವಲ್ಲಿ ಇಡುತ್ತಾರೆ. ಹೀಗೆ ಮಾಡುವುದರಿಂದ ಹೂವಿನ ಪರಿಮಳ ಜಾಸ್ತಿಯಾಗುತ್ತದೆ. ವರ್ಷಾನುಗಟ್ಟಲೆ ಅದರ ಬಣ್ಣ ಮತ್ತು ಸುವಾಸನೆ ಮಾಸದೇ ಬಾಳಿಕೆ ಬರುತ್ತದೆ. ಹೆಂಗಸರು ತಮಗೆ ಬೇಕಾದಾಗ ಮುಡಿದು ಬೇಡವಾದಾಗ ತೆಗೆದಿಡುತ್ತಾರೆ. ತಮ್ಮ ಮನೆಯ ಕರಡಿಗೆಗಳಲ್ಲಿ ವರ್ಷಗಳ ಕಾಲ ಜೋಪಾನವಾಗಿಟ್ಟು ಮತ್ತೆ ಮತ್ತೆ ಮುಡಿಯುತ್ತಾರೆ. ತಾಜಾ ಹೂವಿಗಿಂತ ಈ ಹೂವಿಗೆ ಬೇಡಿಕೆ ಜಾಸ್ತಿ.

ಬಹು ಉಪಯೋಗಿ…

ಸುಗಂಧ ದ್ರವ್ಯಗಳ ತಯಾರಿಕಾ ಉದ್ಯಮಗಳಿಂದ ಈ ಹೂವಿಗೆ ಬಹುಪಾಲು ಬೇಡಿಕೆ ಇದೆ. ಹೆಚ್ಚಿನ ಪಾಲು ಸುಗಂಧ ದ್ರವ್ಯಗಳ ತಯಾರಿಕೆಗೆ ಉಪಯೋಗಿಸಲ್ಪಡುತ್ತದೆ. ಹೋಟೆಲ್‌ಗ‌ಳಲ್ಲಿ ಭಕ್ಷ್ಯಗಳನ್ನು ಅಲಂಕರಿಸಲು, ಸಲಾಡ್‌ಗಳಿಗೆ ಪರಿಮಳ ಸೇರಿಸಲು, ಆರೋಮ್ಯಾಟಿಕ್‌ ಚಹಾ ತಯಾರಿಸಲು ಸುರಗಿಯ ಹೂವುಗಳನ್ನು ಬಳಸಲಾಗುತ್ತಿದೆ. ಸುರಗಿ ಮರದ ಎಲೆಗಳು, ತೊಗಟೆ ಮತ್ತು ಬೇರು, ಹೂವು, ಹಣ್ಣುಗಳೂ ಸೇರಿದಂತೆ ಎಲ್ಲ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಸುರಗಿಯ ಮರದ ಕಾಂಡಗಳನ್ನು ಅದರ ಬಾಳಿಕೆಯ ಗುಣದಿಂದಾಗಿ ಪೀಠೊಪಕರಣಗಳ ತಯಾರಿಕೆಗೂ ಬಳಸಿಕೊಳ್ಳುತ್ತಾರೆ.

ಸಸ್ಯ ಪ್ರಪಂಚದಲ್ಲಿಯೇ ಅತ್ಯಂತ ವಿಶಿಷ್ಟವಾದ ಈ ಹೂ, ಈ ಮರ ಇತ್ತೀಚೆಗೆ ಅಪರೂಪವಾಗುತ್ತಿದೆ. ಕಾಡಿನ ನಾಶದ ಭಾಗವಾಗಿ ಇನ್ನಿಲ್ಲವಾಗುವ ಇಂತಹ ಸಸ್ಯ ಸಂಕುಲವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು.

ಶಿವನಿಗೆ ಪ್ರಿಯವಾದ ಹೂವು:

ದೇವರ ಪೂಜೆಗೂ ಸುರಗಿಯ ಒಣಗಿದ ಹೂ ಮಾಲೆಯನ್ನು ಬಳಸುವ ಪದ್ಧತಿ ಇದೆ. ಶಿವರಾತ್ರಿಯ ಸಮಯದಲ್ಲಿಯೇ ಇದು ಅರಳುವದರಿಂದ ಶಿವನಿಗೆ ಪ್ರೀತಿ ಎಂಬುದು ಜನಮಾನಸದಲ್ಲಿ ಪ್ರತೀತಿ. ಜಾನಪದದಲ್ಲೂ ಸುರಗಿಗೆ ಮಹತ್ವದ ಸ್ಥಾನವಿದೆ. ಸುರಗಿ ಸುರ ಸಂಪಿಗೆ… ಕೋಲು ಕೋಲೆನ್ನ ಕೋಲೇ …ಚಂದದಿಂದ ಸಿದ್ದರಾಮ ಕೋಲನ್ನಾಡಿದ, ದೇವ ಕೋಲನ್ನಾಡಿದ.. ಎಂದು ಕೋಲಾಟದ ಹಾಡಿನಲ್ಲೂ ಜನಪದರು ಸುರಗಿಯನ್ನು ಪ್ರಸ್ತಾಪಿಸುತ್ತಾರೆ.

ಸಾಹಿತ್ಯ ಲೋಕದಲ್ಲೂ…

ಸುರಗಿ ಹೂವು, ಸಾಹಿತ್ಯ ಲೋಕದಲ್ಲೂ ಸ್ಥಾನ ಪಡೆದುಕೊಂಡಿದೆ. ಖ್ಯಾತ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರ ಆತ್ಮ ಕಥನದ ಹೆಸರೂ ಸುರಗಿ. ಒಣಗಿದರೂ ಬಹುಕಾಲ ಪರಿಮಳ ಬೀರುವ ಹೂ ಎಂದೇ, ತಮ್ಮ ಆತ್ಮಕಥೆಗೆ ಆ ಹೆಸರು ನೀಡಿರುವುದಾಗಿ ಅನಂತಮೂರ್ತಿ ಹೇಳಿಕೊಂಡಿದ್ದಾರೆ.

ಚಿತ್ರ-ಲೇಖನ: ಜಿ.ಆರ್‌. ಪಂಡಿತ್‌

Advertisement

Udayavani is now on Telegram. Click here to join our channel and stay updated with the latest news.

Next