ಮಹಾರಾಷ್ಟ್ರ: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಬಂದಿದೆ ಎಂದು ಸಂಸದೆ ಸುಪ್ರಿಯಾ ಸುಳೆ ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, “ಶರದ್ ಪವಾರ್ ಅವರಿಗೆ ಜೀವ ಬೆದರಿಕೆ ಬಂದಿದೆ. ನನ್ನ ವಾಟ್ಸಾಪ್ ಗೆ ಅಪರಿಚಿತರು ವೆಬ್ ಸೈಟ್ ವೊಂದರ ಮೂಲಕ ಜೀವ ಬೆದರಿಕೆಯನ್ನು ಹಾಕಿರುವ ಸಂದೇಶಗಳು ಬಂದಿದೆ. ಪೊಲೀಸರ ಬಳಿ ಕ್ರಮಕೈಗೊಳ್ಳಿ ಎಂದು ಕೇಳಲು ಬಂದಿದ್ದೇನೆ” ಎಂದು ಎಎನ್ ಐಗೆ ಸುಪ್ರಿಯಾ ಸುಳೆ ಅವರು ತಿಳಿಸಿದ್ದಾರೆ.
“ನಾನು ಮಹಾರಾಷ್ಟ್ರ ಗೃಹ ಸಚಿವರು ಮತ್ತು ಕೇಂದ್ರ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಇದು ಕೀಳುಮಟ್ಟದ ರಾಜಕೀಯವಾಗಿದ್ದು, ಇದು ನಿಲ್ಲಬೇಕು,” ಎಂದು ಸುಪ್ರಿಯಾ ಸುಳೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಇದನ್ನೂ ಓದಿ: ಇದು ಯಾವ ರೀತಿಯ ಪ್ರೀತಿ? ರಾಹುಲ್ ‘ಮೊಹಬ್ಬತ್ ಕಿ ದುಕಾನ್’ ಹೇಳಿಕೆಗೆ ಸ್ಮೃತಿ ತಿರುಗೇಟು
“ಶರದ್ ಪವಾರ್ ಅವರ ಭದ್ರತೆಯ ಜವಾಬ್ದಾರಿ ಗೃಹ ಸಚಿವಾಲಯದ ಮೇಲಿದೆ. ಈ ಪ್ರಕರಣದಲ್ಲಿ ಗೃಹ ಸಚಿವರು ಮಧ್ಯ ಪ್ರವೇಶಿಸಬೇಕು. ಶರದ್ ಪವಾರ್ ದೇಶದ ನಾಯಕ. ಎನ್‌ಸಿಪಿ ಮುಖ್ಯಸ್ಥರಿಗೆ ಬೆದರಿಕೆ ಇದೆ ಎಂದು ನಾನು ಪೊಲೀಸರಿಗೆ ಹೇಳಿದ್ದೇನೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ” ಎಂದು ವರದಿ ತಿಳಿಸಿದೆ.
ಇನ್ನೊಂದೆಡೆ ಲೋಕಸಭಾ ಸದಸ್ಯ ಸಂಜಯ್ ರಾವತ್ ಹಾಗೂ ಅವರ ಸಹೋದರ ಶಾಸಕ ಸುನಿಲ್ ರಾವತ್ ಅವರಿಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆ ಬಂದಿವೆ ಎಂದು ವರದಿಯಾಗಿದೆ.