ಬೆಂಗಳೂರು: ನಗರದ ಹೃದಯ ಭಾಗದ ಟರ್ಫ್ ಕ್ಲಬ್ ಅನ್ನು ಡಿ.2ರ ನಂತರ ಸ್ಥಗಿತಗೊಳಿಸಲು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಶಿಫಾರಸ್ಸು ಮಾಡಿದೆ. ಆದರೆ, ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಪ್ರಕರಣ ಇತ್ಯರ್ಥವಾಗುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.
2009ರಲ್ಲೇ ರೇಸ್‌ಕೋರ್ಸ್‌ಗೆ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಅದನ್ನು ವಾಪಸ್ ಪಡೆದುಕೊಳ್ಳಲು ಸರ್ಕಾರ ಮುಂದಾಗಿದ್ದಾಗ ಟರ್ಫ್ ಕ್ಲಬ್‌ನವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ವೇಳೆ ರಾಜ್ಯ ಸರ್ಕಾರದ ಅಡ್ವೋಕೆಟ್ ಜನರಲ್ ಅಶೋಕ್ ಹಾರ್ನಳ್ಳಿ ಅವರು 2010 ರ ಸೆ.7 ರಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಎದುರು ರಾಜ್ಯ ಸರ್ಕಾರದ ಪರ ಹಾಜರಾಗಿ ಈ ಪ್ರಕರಣ ಇತ್ಯರ್ಥವಾಗುವವರೆಗೂ ಉಭಯ ಕಕ್ಷಿದಾರರು ಯಥಾ ಸ್ಥಿತಿ ಕಾಯ್ದುಕೊಳ್ಳುತ್ತಾರೆ ಎಂದು ಕೋರ್ಟ್‌ಗೆ ಹೇಳಿಕೆ ನೀಡಿದ್ದರು.
ಅಡ್ವೋಕೆಟ್ ಜನರಲ್ ಅವರು ಸುಪ್ರೀಂ ಕೋರ್ಟ್‌ಗೆ ಮಾಡಿಕೊಂಡ ಮನವಿ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ. ಟರ್ಫ್ ಕ್ಲಬ್ ಪ್ರಕರಣ ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರವೇ ಯಥಾ ಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಸುಪ್ರಿಂ ಕೋರ್ಟ್ ಮುಂದೆ ಹೇಳಿಕೆ ನೀಡಿರುವುದನ್ನು ಎಚ್. ಕೆ.ಪಾಟೀಲ್ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗಮನಿಸಿದ್ದು, ಈ ಬಗ್ಗೆ ಕಳೆದ 9 ವರ್ಷಗಳಿಂದ ಕಾನೂನು ಇಲಾಖೆ ತಡೆಯಾಜ್ಞೆ ತೆರವುಗೊಳಿಸಲು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಡಿ.2 ರೊಳಗೆ ಸುಪ್ರೀಂ ಕೋರ್ಟ್‌ನಲ್ಲಿನ ತಡೆಯಾಜ್ಞೆ ತೆರವಿಗೆ ವಿಶೇಷ ವಕೀಲರನ್ನು ನೇಮಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
ಅಧಿಕಾರಿಗಳ ಮಟ್ಟದಲ್ಲೇ ತೀರ್ಮಾನ: ರಾಜ್ಯ ಸರ್ಕಾರ ಟರ್ಫ್ ಕ್ಲ ಬ್‌ಗ ನೀಡಿದ ಗುತ್ತಿಗೆ ಅವಧಿ 1989ಕ್ಕೆ ಅಂತ್ಯವಾಗಿತ್ತು. ಆ ನಂತರ 1995ರವರೆಗೆ ಲೋಕೋಪಯೋಗಿ ಇಲಾಖೆ ಯಾಗಲಿ, ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವನ್ನು 2005 ರಲ್ಲಿ ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದ ಸಮಿತಿ ಗಂಭೀರ ಪರಿಗಣಿಸಿ, ಸರ್ಕಾರದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.
1998ರಲ್ಲಿ ಟರ್ಫ್ ಕ್ಲಬ್‌ಗ ಮಾಸಿಕ 30 ಲಕ್ಷ ರೂ. ಬಾಡಿಗೆ ನಿಗದಿಪಡಿಸಬಹುದೆಂದೂ ಲೋಕೋಪಯೋಗಿ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಶೇ.50 ಬಾಡಿಗೆ ಹೆಚ್ಚಿಸಲು ಶಿಫಾರಸು ಮಾಡಿದೆ. ಆದರೆ, 1998 ಆ.19ರಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ಅಧಿಕಾರಿಗಳೇ ಸಭೆ ನಡೆಸಿ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ವಾರ್ಷಿಕ 10 ಲಕ್ಷ ರೂ.ಗಳಂತೆ 10 ವರ್ಷಗಳವರೆಗೆ ಬಾಡಿಗೆ ತೆಗೆದುಕೊಳ್ಳಲು ತೀರ್ಮಾನ ಕೈಗೊಂಡಿದ್ದಾರೆ. ಲೋಕೋಪಯೋಗಿ ಸಚಿವರು ಹಾಗೂ ಯಾವುದೇ ಸಚಿವರ ಗಮನಕ್ಕೆ ತಾರದೇ ಅಧಿಕಾರಿಗಳೇ ತೀರ್ಮಾನ ತೆಗೆದುಕೊಂಡಿರುವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ಈ ನಿರ್ಧಾರದಿಂದ ವಾರ್ಷಿಕ 7.5 ಕೋಟಿಯಂತೆ 67.50 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದನ್ನು ಪಿಎಸಿ ಬೆಳಕಿಗೆ ತಂದಿದೆ. ಕಳೆದ 13 ವರ್ಷಗಳಿಂದ ಟಫ್ì ಕ್ಲಬ್ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ನೀಡದೇ ಮೌನ ವಹಿಸಿದ್ದು, ಸಮಿತಿ ಅಧಿಕಾರಿಗಳ ಮೌನದ ಬಗ್ಗೆ ಪ್ರಶ್ನೆ ಮಾಡಿದೆ. ಇದರ ಹಿಂದಿರುವ ಕೈಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆನ್ನಲಾಗಿದೆ.
-ಶಂಕರ ಪಾಗೋಜಿ