ಬೆಂಗಳೂರು: ವಿಧಾನಸಭೆ ಕಲಾಪ ಸಂದರ್ಭದಲ್ಲಿ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರಕ್ಕೆ ಮುಂದೂಡಿದ ಬಗ್ಗೆ ಅಧಿಕಾರಿಗಳ ಗ್ಯಾಲರಿಯಿಂದ ಚೀಟಿ ಕಳುಹಿಸಿದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತುಸು ನಿರಾಳರಾದರು.
ಚೀಟಿ ತೆರೆದು ನೋಡಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ತೋರಿಸಿ ಮಡಚಿಟ್ಟುಕೊಂಡರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅದನ್ನು ನೋಡಿ ಗೆಲುವಿನ ಸಂಕೇತ ತೋರಿದರು. ಇದರ ನಡುವೆ ಸಚಿವ ಡಿ.ಕೆ.ಶಿವಕುಮಾರ್ ಸಹ ಸುಪ್ರೀಂಕೋರ್ಟ್‌ನ ವಿಚಾರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಎಚ್.ಡಿ.ರೇವಣ್ಣ ಸೇರಿ ಹಲವು ಸಚಿವರಿಗೆ ತಿಳಿಸಿದರು.
ಈ ಮಧ್ಯೆ, ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಓಡಾಡುತ್ತಾ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೆಲ್ಲರೂ ಇದ್ದಾರಾ ಎಂದು ಕಣ್ಣಲ್ಲೇ ಲೆಕ್ಕ ಹಾಕುತ್ತಿದ್ದರು. ಕುಂದಗೋಳ ಕ್ಷೇತ್ರದಿಂದ ಆಯ್ಕೆಯಾಗಿ ಇದೇ ಮೊದಲ ಬಾರಿಗೆ ಸದನ ಪ್ರವೇಶಿಸಿರುವ ಕುಸುಮಾವತಿ ಶಿವಳ್ಳಿ ಅವರ ಬಳಿ ಹೋಗಿ, ಕೆಲವು ನಿರ್ದೇಶನ ನೀಡಿದರು. ನಂತರ ಸದನಕ್ಕೆ ಹಾಜರಾಗಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿ ಅವರೊಂದಿಗೆ ಕೆಲಹೊತ್ತು ಚರ್ಚಿಸಿದರು.
ಜಮೀರ್ ಚರ್ಚೆ: ಈ ಮಧ್ಯೆ, ಜೆಡಿಎಸ್‌ನ ಶಾಸಕ ಕೆ.ಶ್ರೀನಿವಾಸಗೌಡ ಅವರೊಂದಿಗೆ ಸಚಿವ ಜಮೀರ್ ಅಹಮದ್ ಚರ್ಚಿಸಿದರು. ನಂತರ ಅಲ್ಲಿಂದ ಸಿದ್ದರಾಮಯ್ಯ ಬಳಿ ಹೋಗಿ ಮಾತನಾಡಿದರು. ಅಷ್ಟರಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರು ಬಂದು, ನಾನು ಸಾಹೇಬ್ರ ಹತ್ರ ಮಾತಾಡ್ಬೇಕು ಎಂದು ಹೇಳಿದರು. ಮೂವರೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸುತ್ತಿರುವಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಲ್ಲಿಗೆ ಬಂದು ಜಮಾವಣೆಗೊಂಡರು.
ಗೈರು: ಶುಕ್ರವಾರದ ಸದನಕ್ಕೆ ಕಾಂಗ್ರೆಸ್ ಶಾಸಕರಾದ ಸುಬ್ಬಾರೆಡ್ಡಿ, ಕನೀಜ್ ಫಾತಿಮಾ ಹಾಗೂ ನಾಗೇಂದ್ರ ಗೈರು ಹಾಜರಾಗಿದ್ದರು. ರಾಜೀನಾಮೆ ನೀಡಿದ್ದ ಶಾಸಕರು ಬಂದಿರಲಿಲ್ಲ.
ಎಲ್ಲೆಲ್ಲೂ ಅದೇ ಚರ್ಚೆ: ವಿಧಾನಮಂಡಲ ಅಧಿವೇಶನದಲ್ಲಿ ಎರಡೂ ಸದನಗಳ ಮೊಗಸಾಲೆಯಲ್ಲಿ ಸರ್ಕಾರ ಅಳಿವು-ಉಳಿವಿನದೇ ಚರ್ಚೆ. ಬಿಜೆಪಿ ಶಾಸಕರು, ಎಷ್ಟು ದಿನ ಗುರೂ ಎಂದು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಕಿಚಾಯಿಸಿದರೆ, ನೋಡ್ತಾ ಇರಿ ಅಂತ ಇವರೂ ಟಾಂಗ್ ನೀಡಿದರು.
ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಓಡಾಡುತ್ತಾ, ಕಾಂಗ್ರೆಸ್-ಜೆಡಿಎಸ್ ಶಾಸಕರ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಕಾಂಗ್ರೆಸ್-ಜೆಡಿಎಸ್ ನಾಯಕರು, ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿರಬಹುದು ಎಂಬ ಶಂಕೆಯಿಂದ ಅವರ ಮೇಲೆ ನಿಗಾವಹಿಸಿದ್ದರು.