ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಗುರುವಾರ 29ನೇ ದಿನಕ್ಕೆ ಕಾಲಿಡುತ್ತಿರುವಂತೆಯೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸರ್ಕಾರ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ. ಇದು ನಿಜಕ್ಕೂ ಆತಂಕಕಾರಿಯಾಗಿರುವ ವಿಚಾರವೇ ಹೌದು. ಏಕೆಂದರೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ 2017ರಲ್ಲಿ ಆ ದೇಶ ಮೊದಲ ಬಾರಿಗೆ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಿದ ಸಂದರ್ಭಕ್ಕಿಂತ ಅತ್ಯಧಿಕವಾಗಿರುವ ಶಕ್ತಿ ಮತ್ತು ಪ್ರಭಾವ ಹೊಂದಿರುವ ಹೊಸ ಮಾದರಿಯ ಖಂಡಾಂತರ ಕ್ಷಿಪಣಿಯನ್ನು ಕಿಮ್ ಜಾಂಗ್ ಉನ್ ಆಡಳಿತ ಪ್ರಯೋಗ ಮಾಡಿದೆ.
ಆ ದೇಶದ ಜತೆಗೆ ಚೀನ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರ ಉತ್ತಮ ಬಾಂಧವ್ಯ ಹೊಂದಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಅದು ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ಪ್ರಲಾಪ ಎಂದು ತೀರ್ಮಾನಿಸುವುದು ಸರಿಯಲ್ಲ. ಸದ್ಯ ಜಪಾನ್‌ನ ಹೊಕ್ಕೆ„ಡೋ ದ್ವೀಪ ವ್ಯಾಪ್ತಿಯ ಜಲಪ್ರದೇಶಕ್ಕೆ ಬಿದ್ದ ಕ್ಷಿಪಣಿ ಮುಂದಿನ ದಿನಗಳಲ್ಲಿ ಬೇರೆ ದೇಶದ ಗಡಿ ಪ್ರದೇಶಕ್ಕೆ ಸಿಡಿಯಲೂ ಬಹುದು ಅಥವಾ ಉದ್ದೇಶ ಪೂರ್ವಕವಾಗಿಯೇ ಉಡಾಯಿಸಬಹುದು. ಏಕೆಂದರೆ, ಉತ್ತರ ಕೊರಿಯಾದಲ್ಲಿ ಚಿತ್ರ-ವಿಚಿತ್ರ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಆಡಳಿತ ನಡೆಸುವ ಕುಖ್ಯಾತಿ ಕಿಮ್ ಸರಕಾರದ್ದು.
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆ 2018ರಲ್ಲಿ ಕಿಮ್ ಸರಕಾರದ ಜತೆಗೆ ಮಾತುಕತೆ ನಡೆಸಲಾಗಿತ್ತು. ಬಳಿಕ ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸುವುದನ್ನು ನಿಲ್ಲಿಸುವುದಾಗಿ ಸರಕಾರ ಹೇಳಿತ್ತು. 2020ರಲ್ಲಿ ಅದನ್ನು ಉಲ್ಲಂಘಿಸುವ ಬಗ್ಗೆ ಪ್ರಕಟಿಸಿತ್ತು. ಈ ಪರೀಕ್ಷೆಗಳಿಂದ ಉತ್ತರ ಕೊರಿಯಾ ಸಾಧಿಸುವು ದಾದರೂ ಏನು ಎಂಬುದೇ ಕುತೂಹಲಕಾರಿ ಅಂಶವಾಗಿದೆ. ಅಮೆರಿಕ ಮತ್ತು ಜಪಾನ್ ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನಗಳಿಂತಲೂ ಅಧಿಕ ಸಾಮರ್ಥ್ಯ ಹೊಂದಿರುವ ಹಾಗೂ ಆ ಸರಕಾರಗಳು ಹೊಂದಿರುವ ರಕ್ಷಣ ವ್ಯವಸ್ಥೆ ಅಂದಾಜು ಮಾಡಲೂ ಸಾಧ್ಯವಿಲ್ಲದ ಕ್ಷಿಪಣಿ ವ್ಯವಸ್ಥೆ ಹೊಂದುವುದರತ್ತ ಆ ದೇಶ ಆಸಕ್ತ ಹೊಂದಿದೆ. ಕೊರಿಯಾ ವ್ಯಾಪ್ತಿಯ ಪ್ರದೇಶದಲ್ಲಿ ಅಮೆರಿಕದ ಸೇನೆ ಇದೆ. ಈ ಮೂಲಕ ಅಮೆರಿಕ ಎಂದಾದರೂ ಒಂದು ದಿನ ತನ್ನ ಮೇಲೆ ದಾಳಿ ಮಾಡಬಹುದು ಎಂಬ ಆತಂಕ ಕಿಮ್ ಸರಕಾರಕ್ಕಿದೆ. ಜಪಾನ್ ಹೇಗಿದ್ದರೂ, ಅಮೆರಿಕದ ಜತೆಗೆ ಉತ್ತಮ ಬಾಂಧವ್ಯ ಹೊಂದಿದೆ. ಹೀಗಾಗಿ, ಜನರಿಗೆ ತುತ್ತು ಕೂಳಿಗೆ ಗತಿ ಇಲ್ಲದೇ ಇದ್ದರೂ, ಪ್ರಬಲ ರಕ್ಷಣ ವ್ಯವಸ್ಥೆ ಬೇಕು ಎನ್ನುವುದು ಕಿಮ್ ಸರಕಾರ ಹೊಂದಿರುವ ವ್ಯರ್ಥಾಲಾಪದ ವಾದ.
ಇದರ ಜತೆಗೆ ವಿಶ್ವಸಂಸ್ಥೆಯ ಗಮನ ಸೆಳೆದು, ಬೆದರಿಕೆಯ ತಂತ್ರದ ಮೂಲಕವಾದರೂ ಆರ್ಥಿಕ ದಿಗ್ಬಂಧನವನ್ನು ತೆಗೆದು ಹಾಕುವ ದೂರದ ಆಲೋಚನೆ. ದಕ್ಷಿಣ ಕೊರಿಯಾ ಮೂಲಕ ಜಗತ್ತಿಗೆ ಆಗಾಗ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ ಜನರು ಹಲವು ರೀತಿಯ ಸಂಕಷ್ಟಗಳನ್ನು ನಿವಾರಿಸುವುದು ಆದ್ಯತೆಯಾಗಿರಬಹುದು. ಅದೇನೇ ಇರಲಿ, ಕೊರೊನಾದ ಜತೆಗೆ ರಷ್ಯಾ-ಉಕ್ರೇನ್ ಕಾಳಗ ಜಗತ್ತನ್ನು ಕಾಡುತ್ತಿದೆ. ಅದರ ನಡುವೆ ಇಂಥ ಕಿಡಿಗೇಡಿತನ ಖಂಡನೀಯ. ಜಗತ್ತಿನ ಶಾಂತಿಗಾಗಿ ಸ್ಥಾಪನೆಯಾಗಿರುವ ವಿಶ್ವಸಂಸ್ಥೆ ಉತ್ತರ ಕೊರಿಯಾದ ವ್ಯರ್ಥಾಲಾಪಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲೇಬೇಕು.