Advertisement

ಸುಪ್ರೀಂನ ದಿಟ್ಟ ತೀರ್ಪು

08:50 AM Mar 12, 2018 | Harsha Rao |

ಘನತೆಯಿಂದ ಬದುಕುವಂತೆ ಘನತೆಯಿಂದ ಸಾಯುವ ಹಕ್ಕು ಇದೆ ಎನ್ನುವ ಅಂಶವನ್ನು ಎತ್ತಿಹಿಡಿಯುವ ಮೂಲಕ ಸರ್ವೋತ್ಛ ನ್ಯಾಯಾಲಯ ಈ ಕುರಿತಾಗಿ ದಶಕಗಳಿಂದ ನಡೆಯುತ್ತಿದ್ದ ಚರ್ಚೆಗೆ ತಾರ್ಕಿಕ ಅಂತ್ಯ ನೀಡಿದೆ. ಶುಕ್ರವಾರ ಪ್ರಕಟವಾಗಿರುವ ತೀರ್ಪು ಭಾರತದ ಮಟ್ಟಿಗಂತೂ ಐತಿಹಾಸಿಕವೆಂದೇ ಹೇಳಬಹುದು. ದಯಾಮರಣ ಬೇಕೆ ಬೇಡವೆ ಎಂಬುದರ ಕುರಿತು ಅಪಾರ ಚರ್ಚೆಯಾಗಿದೆ. ದಯಾಮರಣವನ್ನು ಸಮರ್ಥಿಸುವಷ್ಟೇ ವಿರೋಧಿಸುವವರೂ ಇದ್ದಾರೆ.

Advertisement

ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ ದಯಾಮರಣ ಒಪ್ಪುವ ವಿಚಾರವಲ್ಲ ಎನ್ನಲಾಗುತ್ತಿತ್ತು. ಎಷ್ಟೇ ಕಷ್ಟನಷ್ಟವಾದರೂ ಹಿರಿಯರನ್ನು, ಕಾಯಿಲೆ ಬಿದ್ದವರನ್ನು ಕಡೇಗಾಲದ ತನಕ ಆರೈಕೆ ಮಾಡಬೇಕು ಎನ್ನುವ ಸಂಸ್ಕೃತಿ ನಮ್ಮದು. ಇದರ ಮೇಲೆ ನಂಬಿಕೆಯಿರುವವರಿಗೆ ಸುಪ್ರೀಂ ಕೋರ್ಟಿನ ಶುಕ್ರವಾರದ ತೀರ್ಪನ್ನು ಜೀರ್ಣಿಸಿಕೊಳ್ಳಲು ತುಸು ಕಷ್ಟವಾಗಬಹುದು. ಆದರೆ ಇದೇ ವೇಳೆ ಇನ್ನೆಂದೂ ಮೊದಲಿನಂತಾಗದೆ ಜೀವತ್ಛವದಂತೆ ಬಿದ್ದುಕೊಂಡಿ ರುವವರ ಮತ್ತು ಅವರನ್ನು ಆರೈಕೆ ಮಾಡುವವರ ದೃಷ್ಟಿಯಿಂದ ನೋಡಿದರೆ ಈ ತೀರ್ಪು ಸ್ವಾಗತಾರ್ಹ.

ಹಾಗೆಂದು ಸುಪ್ರೀಂ ಕೋರ್ಟ್‌ ಎಲ್ಲ ವಾಸಿಯಾಗದ ಪ್ರಕರಣಗಳಲ್ಲಿ ದಯಾಮರಣ ನೀಡಲು ಸಮ್ಮತಿಸಿಲ್ಲ. ಹಾಸಿಗೆ ಹಿಡಿದಿರುವ ವ್ಯಕ್ತಿ ಲಿವಿಂಗ್‌ ವಿಲ್‌ ಅಂದರೆ ಮುಂಚಿತವಾಗಿ ಜೀವರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಲು ಅನುಮತಿ ನೀಡಿದ ವಿಲ್‌ ಬರೆದಿಟ್ಟಿದ್ದರೆ ಮಾತ್ರ ದಯಾಮರಣ ನೀಡಬಹುದು. ಇದಕ್ಕೂ ನ್ಯಾಯಾಲಯ ಹಲವು ಕಟ್ಟುನಿಟ್ಟಿನ ಮಾರ್ಗದರ್ಶಿ ಸೂತ್ರವನ್ನು ರಚಿಸಿದೆ. ವೈದ್ಯಕೀಯ ಮಂಡಳಿ ಮತ್ತು ನ್ಯಾಯಾಂಗದ ಮಧ್ಯಪ್ರವೇಶದ ಬಳಿಕವೇ ದಯಾಮರಣ ಜಾರಿಯಾಗಲು ಸಾಧ್ಯ. ರೋಗಿಯ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ದಯಾಮರಣ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರೆ ನ್ಯಾಯಾಲಯ ದಯಾಮರಣದ ಅಗತ್ಯವಿದೆಯೇ ಎಂದು ವೈದ್ಯರಿಂದ ವರದಿ ಕೇಳಬೇಕು. ಹೀಗೆ ವೈದ್ಯರಿಗೆ ಮತ್ತು ನ್ಯಾಯಾಲಯಕ್ಕೆ ಇದು ದಯಾಮರಣಕ್ಕೆ ಅರ್ಹವಾದ ಪ್ರಕರಣ ಎಂದು ಮನವರಿಕೆಯಾಗ ಬೇಕಾದರೆ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆದು ಹಾಕಿ ನೆಮ್ಮದಿಯ ಸಾವಿಗೆ ಅವಕಾಶ ಮಾಡಿಕೊಡಬಹುದು.

ದಯಾಮರಣದ ವಿಚಾರ ಬಂದಾಗಲೆಲ್ಲ ನೆನಪಾಗುವುದು ಮುಂಬ ಯಿಯ ಕೆಇಎಂ ಆಸ್ಪತ್ರೆಯಲ್ಲಿ ಸರಿಸುಮಾರು ನಾಲ್ಕು ದಶಕಗಳ ಕಾಲ ಕೋಮಾ ಸ್ಥಿತಿಯಲ್ಲಿ ನರಳಿ ಮೂರು ವರ್ಷಗಳ ಹಿಂದೆಯಷ್ಟೇ ತೀರಿಕೊಂಡಿರುವ ಕನ್ನಡತಿ ನರ್ಸ್‌ ಅರುಣಾ ಶಾನುಭಾಗ್‌. ಅರುಣಾಗೆ ದಯಾಮರಣ ಕೊಡಿಸಲು ಅವರ ಸ್ನೇಹಿತೆ ನಡೆಸಿದ ಪ್ರಯತ್ನ ವಿಫ‌ಲವಾಗಿದ್ದರೂ ಇದೇ ನಿಮಿತ್ತವಾಗಿ ವ್ಯಾಪಕ ಚರ್ಚೆ ನಡೆದು ಕಡೆಗೂ ನ್ಯಾಯಾಲಯ ದಿಟ್ಟ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯ, ನ್ಯೂಜಿ
ಲ್ಯಾಂಡ್‌, ಯುಕೆಯಂತಹ ದೇಶಗಳಲ್ಲಿ ದಯಾಮರಣ ಜಾರಿಯಲ್ಲಿಲ್ಲ. ಜಾರಿಗೆ ತರಲು ಮಾಡಿದ ಹಲವು ಪ್ರಯತ್ನಗಳು ವಿಫ‌ಲಗೊಂಡಿವೆ. ಆದರೆ ಕೆನಡ, ಲಕ್ಸಂಬರ್ಗ್‌, ಬೆಲ್ಜಿಯಂ, ಕೊಲಂಬಿಯಾ ಮುಂತಾದ ದೇಶಗಳಲ್ಲಿ ದಯಾಮರಣಕ್ಕೆ ಕಾನೂನಿನ ರಕ್ಷಣೆಯಿದೆ. ಈ ದೇಶಗಳಲ್ಲಿ ದಯಾಮರಣ ದುರುಪಯೋಗವಾಗಿರುವುದು ವಿರಳಾತಿವಿರಳ. ಇದಕ್ಕೆ ಕಾರಣ ಈ ದೇಶಗಳಲ್ಲಿರುವ ಕಟ್ಟುನಿಟ್ಟಿನ ಕಾನೂನು.

ಭಾರತದಲ್ಲಿ ದಯಾಮರಣಕ್ಕೆ ಅನುಮತಿ ಸಿಕ್ಕಿತು ಎಂಬ ಸುದ್ದಿ ಬಂದಾಗ ಎಲ್ಲರ ಮನಸ್ಸಿನಲ್ಲಿ ಮೂಡಿದ ಅನುಮಾನ ನಮ್ಮ ದೇಶದಲ್ಲಿ ಇದು ದುರುಪಯೋಗವಾದಿರುತ್ತದೆಯೇ ಎನ್ನುವುದು. ಎಷ್ಟೇ ಕಠಿನ ಕಾನೂನು ರಚಿಸಿದರೂ ಅದಕ್ಕೆ ಚಳ್ಳೆಹಣ್ಣು ತಿನ್ನಿಸುವ ಚಾಣಾಕ್ಷರಿರುವ ದೇಶವಿದು. ಹೀಗಾಗಿ ಶ್ರೀಮಂತ ವ್ಯಕ್ತಿಯೇನಾದರೂ ಹಾಸಿಗೆ ಹಿಡಿದರೆ ಅದನ್ನೇ ನೆಪಮಾಡಿಕೊಂಡು ಆತನನ್ನು ವೈದ್ಯರ ನೆರವು ಪಡೆದು ಸಾಯಿಸಿದರೆ ಏನು ಗತಿ ಎಂಬ ಪ್ರಶ್ನೆಯಲ್ಲೂ ಅರ್ಥವಿದೆ.

Advertisement

ಸದ್ಯಕ್ಕೆ ಸುಪ್ರೀಂ ಕೋರ್ಟ್‌ ರಚಿಸಿರುವ ಮಾರ್ಗದರ್ಶಿ ಸೂತ್ರವೇ ದಯಾ ಮರಣವನ್ನು ನಿಯಂತ್ರಿಸುತ್ತದೆ. ಇದಕ್ಕೆ ಬೇಕಾದ ಶಾಶ್ವತ ಕಾನೂನು ರಚಿಸುವ ಹೊಣೆ ಕೇಂದ್ರ ಸರಕಾರದ್ದು. ಈ ಕಾನೂನಿನಲ್ಲಿ ಯಾವುದೇ ರೀತಿಯಲ್ಲೂ ದಯಾಮರಣದ ಸೌಲಭ್ಯ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿದರೆ ಅದನ್ನು ಕೊಲೆಯೆಂದೇ ಪರಿಗಣಿಸಬೇಕಾಗುತ್ತದೆ.ಇದಕ್ಕೆ ಕುಮ್ಮಕ್ಕು ನೀಡಿದವರಿಗೂ ಕಠಿನ ಶಿಕ್ಷೆಯಾಗಲೇ ಬೇಕು. ಹೀಗಾದರೆ ಮಾತ್ರ ದಯಾಮರಣ ಕಾನೂನು ಫ‌ಲಪ್ರದವಾಗಬಹುದು. ದಯಾಮರಣವನ್ನು ನಿರ್ಧರಿಸುವಾಗ ವೈದ್ಯರ ಪಾತ್ರವೇ ನಿರ್ಣಾಯಕ. ವೈದ್ಯರು ಯಾವುದೇ ಆಮಿಷ ಅಥವಾ ಒತ್ತಡಕ್ಕೆ ಬಲಿಬೀಳಬಾರದು. ಒಂದು ವೇಳೆ ವೈದ್ಯರೇ ಅಗತ್ಯವಿಲ್ಲದ ದಯಾಮರಣಕ್ಕೆ ಬೆಂಬಲ ನೀಡಿದರೆ ಅವರ ವೈದ್ಯಕೀಯ ಪ್ರಮಾಣಪತ್ರವನ್ನೇ ಹಿಂದೆಗೆದುಕೊಳ್ಳುವಂತಹ ನಿಯಮಗಳನ್ನು ಕಾನೂ ನಿಗೆ ಸೇರಿಸಿಕೊಳ್ಳುವುದು ಒಳ್ಳೆಯದು.

Advertisement

Udayavani is now on Telegram. Click here to join our channel and stay updated with the latest news.

Next