ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನ್ಯಾಯಾಧೀಶರಿಗಾಗಿಯೇ ಒಂದು ಶಬ್ದಕೋಶ ಸಿದ್ಧಪಡಿಸುತ್ತಿದ್ದಾರೆ. ಕಾನೂನು ಪ್ರಕರಣಗಳಲ್ಲಿ ತೀರ್ಪು ನೀಡುವಾಗ ಸರಿಯಾದ ಲಿಂಗವಾಚಕ ಶಬ್ದಗಳನ್ನು ಬಳಸಬೇಕೆನ್ನುವುದು ಅವರ ಆಗ್ರಹ.
ಸರ್ವೋಚ್ಚ ನ್ಯಾಯಾಲಯದ ಲಿಂಗ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ನ್ಯಾ.ಚಂದ್ರಚೂಡ್, ಅಸಮರ್ಪಕ ನಡವಳಿಕೆ, ಮಹಿಳೆಯರನ್ನು ಕುರಿತು ಅಸಮರ್ಪಕ ಪದಬಳಕೆ ನಿಲ್ಲಬೇಕು.
ತಾನೊಂದು ಪ್ರಕರಣದ ತೀರ್ಪನ್ನು ಪರಿಶೀಲಿಸುತ್ತಿದ್ದೆ. ಅದರಲ್ಲಿ ನ್ಯಾಯಮೂರ್ತಿಯರೊಬ್ಬರು ಪರಪುರುಷನೊಂದಿಗೆ ಸಂಬಂಧವಿಟ್ಟುಕೊಂಡಿದ್ದ ಮಹಿಳೆಯನ್ನು ಉಪಪತ್ನಿ ಎಂದು ಸೂಚಿಸಿದ್ದರು.
ಹೀಗಾಗಿಯೇ ಕಾನೂನುಬದ್ಧ ಲಘುಶಬ್ದಕೋಶ ರಚನೆಗೆ ಆದ್ಯತೆ ನೀಡಲಾಗಿದೆ. ಸದ್ಯದಲ್ಲೇ ಅದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ದೇಶದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶವಿದೆ ಎಂದೂ ತಿಳಿಸಿದ್ದಾರೆ.