ನವದೆಹಲಿ: ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ನಿಷೇಧಿಸಿರುವ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮುಂದಿನ ವಾರದಿಂದ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ಬುಧವಾರ (ಜುಲೈ 13) ತಿಳಿಸಿದೆ.
ಇದನ್ನೂ ಓದಿ:ಲಕ್ನೋ: ಮನೆಯೊಳಗಿದ್ದ ಪಿಟ್ ಬುಲ್ ನಾಯಿ ದಾಳಿಗೆ ನಿವೃತ್ತ ಶಿಕ್ಷಕಿ ಸಾವು
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ಜಸ್ಟೀಸ್ ಕೃಷ್ಣ ಮುರಾರಿ ಮತ್ತು ಜಸ್ಟೀಸ್ ಹಿಮ ಕೊಹ್ಲಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠದಲ್ಲಿ, ವಕೀಲ ಪ್ರಶಾಂತ್ ಭೂಷಣ್ ಅವರು, ಹಿಜಾಬ್ ಕುರಿತ ಅರ್ಜಿಯ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.
ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದ್ದು, ಇದರಿಂದ ತೊಂದರೆ ಅನುಭವಿಸುವಂತಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಲಿಸ್ಟಿಂಗ್ ಆಗಿರುವ ಮನವಿಯ ವಿಚಾರಣೆ ಶೀಘ್ರವೇ ನಡೆಸಬೇಕೆಂದು ಭೂಷಣ್ ತಿಳಿಸಿರುವುದಾಗಿ ವರದಿ ಹೇಳಿದೆ.
ತರಗತಿಯೊಳಗೆ ಹಿಜಾಬ್ ಹಾಕಲು ಅನುಮತಿ ನೀಡಬೇಕೆಂದು ಕೋರಿ ಹಾಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಹಲವು ಮೇಲ್ಮನವಿ ಸಲ್ಲಿಕೆಯಾಗಿತ್ತು. ಸುಪ್ರೀಂಕೋರ್ಟ್ ನಲ್ಲಿ ಎರಡು ಪೀಠಗಳು ಕಾರ್ಯಾಚರಿಸುತ್ತಿಲ್ಲ. ಹೀಗಾಗಿ ನಾವು ಅರ್ಜಿಯನ್ನು ಮರು ಹಂಚಿಕೆ ಮಾಡಬೇಕಾಗುತ್ತದೆ. ಅಲ್ಲದೇ ಅದಕ್ಕೆ ಸಮರ್ಪಕವಾದ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಲಾಗುತ್ತದೆ ಎಂದು ಸಿಜೆಐ ತಿಳಿಸಿದ್ದಾರೆ.